ಧಾರವಾಡ: ನಗರದ ಕೃಷಿ ವಿಶ್ವವಿದ್ಯಾಲಯವು ಕೃಷಿ ಮೇಳದಲ್ಲಿ ಜಿಲ್ಲಾ ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿಗೆ ಭಾಜನರಾದ ರೈತರು ಅಽಕಾರಿ ವರ್ಗದ ವಿರುದ್ಧ ಅಸಮಾಧಾನ ಹೊರಹಾಕಿದರು.
ಕೃಷಿಯಲ್ಲಿ ವಿಶೇಷ ಸಾಧನೆಗೈದ ಹಾಗೂ ರೈತರನ್ನು ಪುರಸ್ಕರಿಸಿ ಇತರರಿಗೆ ಮಾದರಿಯನ್ನಾಗಿಸುವ ಉದ್ದೇಶದಿಂದ ಪ್ರತಿವರ್ಷ ಜಿಲ್ಲೆಗೆ ಒಬ್ಬರಂತೆ ಜಿಲ್ಲಾ ಮಟ್ಟದ ಶ್ರೇಷ್ಠ ಕೃಷಿಕ ಮತ್ತು ಶ್ರೇಷ್ಠ ಕೃಷಿಕ ಮಹಿಳೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಈ ಬಾರಿಯೂ ಮೇಳದ ಮುಖ್ಯ ವೇದಿಕೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರಿಂದ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಆದರೆ, ಪ್ರಶಸ್ತಿ ಪುರಸ್ಕೃತರಿಗೆ ವಿವಿ ಪ್ರಕಟಿಸಿದ ೪ ಪುಸ್ತಕಗಳು, ಸಿರಿಧಾನ್ಯಗಳಿದ್ದ ಪ್ಯಾಕೆಟ್‌ಗಳು ಹಾಗೂ ಕಲರ್ ಝರಾಕ್ಸ್ ಮಾಡಿಸಿದ್ದ ಪ್ರಮಾಣಪತ್ರ ನೀಡಲಾಯಿತು. ಶ್ರೇಷ್ಠ ರೈತರಿಗೆ ಹೂವಿನ ಹಾರ ಅಥವಾ ಪೇಠ, ಸ್ಮರಣಿಕೆ ನೀಡಲಿಲ್ಲ. ಅಲ್ಲದೆ, ನಗದು ಪುರಸ್ಕಾರವೂ ಇರಲಿಲ್ಲ. ಈ ಬಗ್ಗೆ ಅಸಮಾಧಾನ ಹೊರಹಾಕಿದ ರೈತರು, ಗ್ರಾಮ ಮಟ್ಟದ ಸ್ಪರ್ಧೆಗಳಲ್ಲಿ ನೀಡುವಂಥ ಪ್ರಮಾಣಪತ್ರ ನೀಡಿದ್ದಾರೆ. ಸಾಧಕರಿಗೊಂದು ಸ್ಮರಣಿಕೆಯನ್ನೂ ನೀಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.