ಚಿಕ್ಕಬಳ್ಳಾಪುರ: ಜಿಲ್ಲಾ ಕೇಂದ್ರದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಕೈಗೊಳ್ಳುತ್ತಿರುವ ರಸ್ತೆ ವಿಸ್ತರಣೆಯ ನಿರ್ಲಕ್ಷ್ಯ ಕಾಮಗಾರಿಗೆ ಅಸಮಾಧಾನ ವ್ಯಕ್ತವಾಗುತ್ತಿದೆ.
ಹೌದು! ಸದಾ ವಾಹನಗಳು ಮತ್ತು ಜನದಟ್ಟಣೆಯ ಜಾಗದಲ್ಲಿ ನಿಧಾನಗತಿಯ ಕೆಲಸ, ನೀರಿನ ಪೈಪ್ ಲೈನ್ ಮತ್ತು ಕೇಬಲ್ ವೈರುಗಳನ್ನು ಕಿತ್ತು ಹಾಕುವುದು, ಸುರಕ್ಷತೆಯ ಕ್ರಮವನ್ನು ಪಾಲಿಸದೇ ಗುಂಡಿಗಳನ್ನು ಅಗೆಯುವುದು, ಕಾಂಕ್ರೀಟ್ ನಲ್ಲಿ ಕಂಬಿಗಳನ್ನು ಹಾಗೆಯೇ ಬಿಟ್ಟು ಬಿಡುವುದು ಸೇರಿದಂತೆ ನಾನಾ ನಿರ್ಲಕ್ಷ್ಯ ಧೋರಣೆಯು ಸ್ಥಳೀಯ ಆಡಳಿತ ಸಂಸ್ಥೆಯ ಜತೆಗೆ ಜನರ ತಲೆ ನೋವಿಗೆ ಕಾರಣವಾಗಿದೆ.
ಇತ್ತೀಚೆಗೆ ನಗರದ ವೇಣುಗೋಪಾಲ ಸ್ವಾಮಿ ದೇವಸ್ಥಾನದ ಬಳಿ ಜೆಸಿಬಿ ವಾಹನವು ಜಕ್ಕಲಮಡಗು ಪೈಪ್ ಲೈನ್ ಹೊಡೆದು ಹಾಕಿದ್ದು ಗಂಟೆಗಟ್ಟಲೇ ದೊಡ್ಡ ಪ್ರಮಾಣದಲ್ಲಿ ನೀರು ಹರಿದು ಹೋಗಿದೆ. ಸ್ಥಳವು ಜಲಾವೃತಗೊಂಡು ಕುಂಟೆಯ ವಾತಾವರಣ ನಿರ್ಮಾಣವಾಗಿತ್ತು. ಇದರಿಂದ ರಸ್ತೆಯಲ್ಲಿ ಜನ ಮತ್ತು ವಾಹನ ಓಡಾಡಲು ಪರದಾಡುವಂತಾಯಿತು.
*ಹೆದ್ದಾರಿ ನಿಧಾನ ಕಾಮಗಾರಿಗೆ ಬೇಸರ*
ಅತ್ಯಂತ ಗುಣಮಟ್ಟದ ರಸ್ತೆಯನ್ನು ನಗರದಲ್ಲಿ ನಿರ್ಮಿಸುವ ಮೂಲಕ ಇತಿಹಾಸ ಸೃಷ್ಟಿಸುವುದರ ಬಗ್ಗೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಈ ಹಿಂದೆ ಹೇಳಿದ್ದರು. ಆದರೆ ಪ್ರಸ್ತುತ ಚಿಕ್ಕಬಳ್ಳಾಪುರ ನಗರದ ಎಂಜಿ ರಸ್ತೆಯಲ್ಲಿ ನಡೆಯುತ್ತಿರುವ ಕಾಮಗಾರಿ ವೈಖರಿ ಬೇರೆ ರೀತಿ ಇದೆ ಎಂದು ನಗರಸಭಾ ಉಪಾಧ್ಯಕ್ಷ ಜೆ.ನಾಗಾರಾಜ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೂಡಲೇ ಲೋಪದೋಷಗಳನ್ನು ಸರಿಪಡಿಸಿಕೊಂಡು ಗುಣಮಟ್ಟದ ಕಾಮಗಾರಿ ನಡೆಸಲು ಮನವಿ ಮಾಡಿದ್ದಾರೆ.
ಚರಂಡಿ ತ್ಯಾಜ್ಯವು ಜಕ್ಕಲಮಡಗು ಪೈಪ್‌ಲೈನ್‌ಗೆ ಸೇರುತ್ತಿದೆ. ಇದರ ಬಗ್ಗೆ ಗಮನಕ್ಕೆ ತಂದರೂ ಸ್ಪಂದನೆ ಇಲ್ಲ. ನಗರ ವ್ಯಾಪ್ತಿಯಲ್ಲಿ ಕಾಮಗಾರಿ ನಡೆಸುವ ವೇಳೆ ನಗರಸಭೆ ಎಂಜಿನಿಯರ್‌ಗಳಿಗೆ ಮಾಹಿತಿ ನೀಡಿ, ಪೈಪ್ ಲೈನ್ ಮತ್ತು ಕೇಬಲ್ ವೈರು ಅಳವಡಿಕೆಯ ಸ್ಥಳಗಳ ಬಗ್ಗೆ ತಿಳಿದುಕೊಳ್ಳಬೇಕು. ಇದನ್ನು ಬಿಟ್ಟು ಇಷ್ಟ ಬಂದ ರೀತಿಯಲ್ಲಿ ಕಾಮಗಾರಿ ನಡೆಸಲಾಗುತ್ತಿದೆ. ದರ್ಗಾ ಮೊಹಲ್ಲಾ ಮುಂಭಾಗ ಪೈಪ್‌ಲೈನ್ ಒಡೆದು, ನೀರು ಪೋಲಾಗಿದೆ. ಮೂರು ದಿನಗಳಿಂದ ನಾಗರಿಕರಿಗೆ ನೀರು ನೀಡಲು ಸಾಧ್ಯವಾಗಿಲ್ಲ. ಈ ಹಿಂದೆ ಸಾಮಾನ್ಯ ಸಭೆಗೆ ಬರುವಂತೆ ಹೆದ್ದಾರಿ ಪ್ರಾಧಿಕಾರಿದ ಅಧಿಕಾರಿಗಳಿಗೆ ಪತ್ರ ಬರೆದಿದ್ದರೂ ಕ್ಯಾರೆ ಎನ್ನಲಿಲ್ಲ ಎಂದು ಆರೋಪಿಸಿದ್ದಾರೆ.
*ವಿಸ್ತರಣೆಯ ಮಾಹಿತಿ ಕೊರತೆ*
ಚರಂಡಿಯ ಸಮೀಪದ ಎರಡು ಮೀಟರ್ ಫುಟ್‌ಪಾತ್ ನಿರ್ಮಿಸುವ ಬಗ್ಗೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಇಲ್ಲಿಯವರೆಗೆ ಯಾರಿಗೂ ಮಾಹಿತಿ ನೀಡಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ರಸ್ತೆ ವಿಸ್ತರಣೆಗೆ ಜಾಗ ಗುರುತಿಸಿರುವುದರ ಬಗ್ಗೆ ಜನರಲ್ಲಿ ಗೊಂದಲವಿದೆ.
ಕಟ್ಟಡಗಳ ಮಾಲೀಕರು ಚರಂಡಿವರೆಗೂ ನವೀಕರಣದ ಗೋಡೆಗಳನ್ನು ನಿರ್ಮಿಸಿಕೊಳ್ಳುತ್ತಿದ್ದು, ಮುಂದಿನ ದಿನಗಳಲ್ಲಿ ಮತ್ತೆ ಕಟ್ಟಡ ಹೊಡೆಯಬೇಕಾದ ಪರಿಸ್ಥಿತಿ ಬರುತ್ತದೆ ಎನ್ನಲಾಗುತ್ತಿದೆ.
ರಸ್ತೆ ಕಾಮಗಾರಿಯನ್ನು ಪೈಪ್ ಲೈನ್ ಮತ್ತು ಯುಜಿಡಿ ಲೈನ್ ಸ್ಥಳಾಂತರಿಸಿದ ಬಳಿಕ ಆರಂಭಿಸಬೇಕಿತ್ತು. ಇನ್ನು ರಸ್ತೆಯಲ್ಲಿ ವಿದ್ಯುತ್ ಕಂಬಗಳನ್ನು ಅಂಕುಡೊಂಕಾಗಿ ಹಾಕಲಾಗಿದೆ. ಚರಂಡಿಯೂ ನೇರವಾಗಿ ನಿರ್ಮಾಣವಾಗುತ್ತಿಲ್ಲ ಎಂಬುದಾಗಿ ದೂರುಗಳು ಕೇಳಿ ಬರುತ್ತಿವೆ.