ವಿಜಯವಾಣಿ ಸುದ್ದಿಜಾಲ ಧಾರವಾಡ
ಸಂಶೋಧನೆ ಎಂಬುದು ಅಲ್ಪವಿರಾಮ. ಅದು ನಿರಂತರವಾಗಿ ನಡೆಯುವಂತಹದ್ದು. ಲೇಖಕ, ವಿಶೇಷವಾಗಿ ಚಾರಿತ್ರಿಕ ಕಾದಂಬರಿಕಾರ ತಾನು ಕಂಡುಕೊಂಡ, ಸಂಶೋಧಿಸಿದ ಸಂಗತಿಗಳನ್ನಾಧರಿಸಿ ಕೃತಿ ರಚಿಸುತ್ತಾನೆ. ಇಂತಹ ಅಧ್ಯಯನದಿಂದ ಸತ್ಯಗಳು ಹೊರಬಂದಾಗ "ಮಾಗಧ'ದಂತಹ ಕಾದಂಬರಿ ನಿರ್ಮಾಣವಾಗುತ್ತದೆ ಎಂದು ಕಾದಂಬರಿಕಾರ ಯ.ರು. ಪಾಟೀಲ ಹೇಳಿದರು.
ನಗರದ ಉತ್ತರ ಕರ್ನಾಟಕ ಲೇಖಕಿಯರ ಸಂಘದ ವತಿಯಿಂದ ಇಲ್ಲಿನ ಕಸಾಪ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಪ್ರೊ. ಲಲಿತಾಂಬ ವೃಷಭೇಂದ್ರಸ್ವಾಮಿ ದತ್ತಿ ಕಾರ್ಯಕ್ರಮದಲ್ಲಿ ಲೇಖಕಿ ಸಹನಾ ಅವರ ಮಾಗಧ ಕಾದಂಬರಿ ಕುರಿತು ಅವರು ಮಾತನಾಡಿದರು.
ಚಾರಿತ್ರಿಕ ಕಾದಂಬರಿ ಕ್ಷೇತ್ರಕಾರ್ಯ, ವಿಷಯ ಸಂಗ್ರಹಣೆ, ವಿಶ್ಲೇಷಣೆಗಳ ನಂತರ ರೂಪಗೊಳ್ಳುವುದರಿಂದ ಆ ಕೃತಿ ಗಟ್ಟಿ ಕೃತಿ ಆಗಿರುತ್ತದೆ. ಇಂತಹವು ಮಾತ್ರ ಕಾಲದ ಪರೀಕ್ಷೆಯನ್ನು ಯಶಸ್ವಿಯಾಗಿ ಎದುರಿಸುತ್ತವೆ ಎಂದರು.
ಲೇಖಕಿ ರೂಪಾ ಜೋಶಿ ಮಾತನಾಡಿ, ಕಾದಂಬರಿಯಲ್ಲಿ ಎಲ್ಲಿಯೂ ವಿವರಣೆಗಳೇ ಇಲ್ಲ. ಸಂಭಾಷಣೆಗಳೇ ಎಲ್ಲ ವಿಷಯಗಳನ್ನು ಬಿತ್ತರಿಸುತ್ತಾ ಪಾತ್ರಗಳನ್ನು ಕಟ್ಟಿಕೊಡುವ ಸಹನಾರವರ ಬರವಣಿಗೆ ರೀತಿ ಅನನ್ಯವಾದುದು ಎಂದರು.
ಸರಸ್ವತಿ ಭೋಸ್ಲೆ ಮಾತನಾಡಿ, ಸುಲಭವಾಗಿ ಓದಿಸಿಕೊಂಡು ಹೋಗುವ ಲಾಲಿತ್ಯದ ಶೈಲಿ ಇಲ್ಲಿಲ್ಲ. ಧ್ಯಾನಸ್ಥ ಸ್ಥಿತಿಯಲ್ಲಿ ಓದುವ ಓದುಗನಿಗೆ ಮಾತ್ರ ಇದು ನಿಲುಕುವಂತಹದ್ದು. ಕಾದಂಬರಿ ಭಾಷೆ ಹಾಗೂ ಎರಡನೂರಕ್ಕೂ ಮಿಕ್ಕಿರುವ ಪಾತ್ರಗಳ ಕುರಿತಾದ ಮಾಹಿತಿ ಹಂಚಿಕೊಂಡರು.
ದತ್ತಿದಾನಿ ಡಾ. ಎಸ್.ಎಂ. ಶಿವಪ್ರಸಾದ ಮಾತನಾಡಿದರು. ಸಂಘದ ಅಧ್ಯಕ್ಷೆ ಡಾ. ರಾಜೇಶ್ವರಿ ಮಹೇಶ್ವರಯ್ಯ ಅಧ್ಯಕ್ಷತೆ ವಹಿಸಿದ್ದರು. ನಂತರ ಸಂವಾದ ನಡೆಸಲಾಯಿತು. ಸದಸ್ಯರು, ಇತರರು ಇದ್ದರು.
ಡಾ. ಉಷಾ ಗದ್ದಗಿಮಠ ಸ್ವಾಗತಿಸಿದರು. ಮೇಘಾ ಹುಕ್ಕೇರಿ ನಿರೂಪಿಸಿದರು. ಡಾ. ವಿ. ಶಾರದಾ ವಂದಿಸಿದರು.