ಜಿಲ್ಲೆ

ಅನುದಾನ ಕೊರತೆಯಿಂದ ಸಂಶೋಧನೆ ಕ್ಷೀಣ: ಡಾ.ಸಿ.ಎನ್. ಮಂಜುನಾಥ್ ಕಳವಳ

ಮೈಸೂರು: ಅನುದಾನ ಕೊರತೆಯಿಂದಾಗಿ ಎಲ್ಲ ವಿಶ್ವವಿದ್ಯಾಲಯಗಳು ಸಂಶೋಧನೆಯಿಂದ ವಿಮುಕ್ತವಾಗುತ್ತಿವೆ ಎಂದು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಮಾಜಿ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ ಕಳವಳ ವ್ಯಕ್ತಪಡಿಸಿದರು.


ಮೈಸೂರು ವಿಶ್ವವಿದ್ಯಾಲಯದ 104ನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಘಟಿಕೋತ್ಸವ ಭಾಷಣ ಮಾಡಿದರು.


ಸಂಶೋಧನೆಯಿಲ್ಲದೆ ಪ್ರಗತಿ, ನಾವೀನ್ಯತೆ, ಹೊಸ ಚಿಂತನೆ ಇಲ್ಲ. ಕಲಿಕಾ ಕ್ರಿಯೆಯೇ ಸ್ಥಗಿತವಾಗುತ್ತದೆ. ಸಂಶೋಧನೆಯೇ ಹೊಸ ಆವಿಷ್ಕಾರಗಳ ಜೀವಾಳ. ಆದರೆ, ಸಂಶೋಧನಾ ಚಟುವಟಿಕೆಗಳಿಗೆ ನೀಡುವ ಅನುದಾನವನ್ನು ಇತರ ದೇಶಗಳಿಗೆ ಹೋಲಿಕೆ ಮಾಡಿದರೆ ನಮ್ಮ ದೇಶದಲ್ಲಿ ಕನಿಷ್ಠವಾಗಿದೆ. ಈಗಲಾದರೂ ರಾಜ್ಯ ಸರ್ಕಾರ, ಯುಜಿಸಿ ಹೆಚ್ಚಿನ ಸಂಪನ್ಮೂಲ ಕಲ್ಪಿಸಿಕೊಡಬೇಕು ಎಂದು ಆಗ್ರಹಿಸಿದರು.


ಸುಶಿಕ್ಷಿತ ಜನರೇ ಇವತ್ತು ಕಾನೂನುಬಾಹಿರ ಸಂಗತಿ, ಅಪರಾಧ, ದ್ವೇಷ ಮುಂತಾದ ವಿನಾಶಕಾರಿ ಕ್ರಿಯೆಯಲ್ಲಿ ತೊಡಗಿರುವುದು ಆತಂಕಕಾರಿ. ಬುದ್ಧಿವಂತಿಕೆಯನ್ನು ರಚನಾತ್ಮಕ ಉದ್ದೇಶಗಳಿಗೆ ಬಳಸಬೇಕು ಎಂದು ಕಿವಿಮಾತು ಹೇಳಿದರು.


ಸಂಸ್ಕೃತಿ, ವಿವೇಕ, ಸಾಮಾಜಿಕ ಬದ್ಧತೆಯಿಲ್ಲದ ಪದವಿಗಳಿಗೆ ಅರ್ಥವಿಲ್ಲ. ಅದೆಲ್ಲ ಚರಂಡಿ ನೀರಿನಂತೆ ನಿಷ್ಪ್ರಯೋಜಕ. ರಾಷ್ಟ್ರ ಬೆಳವಣಿಗೆಗೆ ಐದು ‘ಇ’(ಸಹಾನುಭೂತಿ, ಶಿಕ್ಷಣ, ಶಕ್ತಿ, ಪರಿಸರ, ಔದ್ಯಮಿಕತೆ) ಸೂತ್ರಗಳು ಬಹಳ ಮುಖ್ಯ ಎಂದರು.


ಸ್ಪರ್ಧಾತ್ಮಕ ಜಗತ್ತಿನಲ್ಲಿ ಕನಸು ನನಸಾಗಬೇಕಾದರೆ ಅನೇಕ ಸವಾಲು ಎದುರಿಸಬೇಕಾಗುತ್ತದೆ. ಆತ್ಮವಿಶ್ವಾಸವಿಲ್ಲದಿದ್ದರೆ ಅಂತಹವರಿಗೆ ಯಶಸ್ಸು ಸಾಧ್ಯವಾಗಲ್ಲ. ಗುರಿ ಸಾಧಿಸಲು 4 ‘ಸಿ’(ಬದ್ಧತೆ, ಕರುಣೆ, ಸ್ಥಿರತೆ, ಸಂವಹನ) ಸೂತ್ರ ಮುಖ್ಯ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.


ಜೀವನದಲ್ಲಿ ಸೋಲಿಗೆ ಹೆದರಬೇಡಿ. ಸೋಲೆಂಬುದು ಕಲಿಕೆಯ ಮೊದಲನೇ ಹೆಜ್ಜೆ. ಅದು ಏಕ್‌ದಂ ಲಭಿಸಲಾರದು. ಶ್ರಮ ವಹಿಸಿ ಕೆಲಸ ಮಾಡಬೇಕು. ಶೀಘ್ರವಾಗಿ ಅನೇಕ ಸಂಗತಿಗಳನ್ನು ಸಾಧಿಸಬೇಕೆಂಬ ತುಡಿತ ಯುವಜನರಲ್ಲಿದೆ. ಇದು ವಿಪರೀತ ಒತ್ತಡಕ್ಕೆ ಕಾರಣವಾಗುತ್ತದೆ. ಯಾವುದಕ್ಕೆ ಎಷ್ಟು ಸಮಯಬೇಕು ಎಂಬುದನ್ನು ಸರಿಯಾಗಿ ನಿರ್ವಹಿಸಬೇಕು. ಇಲ್ಲದಿದ್ದರೆ ನಿರಾಶೆ ಕಟ್ಟಿಟ್ಟ ಬುತ್ತಿ ಎಂದು ಎಚ್ಚರಿಸಿದರು.


ಗುರಿ ಸಾಧನೆಯ ಹಾದಿಯಲ್ಲಿ ಅಡ್ಡ ದಾರಿ ಹಿಡಿಯಬೇಡಿ. ಪಯಣದಲ್ಲಿ ಮುಳ್ಳುಗಳು ಎದುರಾದರೂ ಶ್ರಮ ತ್ಯಜಿಸಬಾರದು. ನ್ಯಾಯಮಾರ್ಗವನ್ನು ಬಿಡದೆ ಬದುಕಿನ ಮೌಲ್ಯಗಳಿಗೆ ಗೌರವ ಸಲ್ಲಿಸಬೇಕು. ಇತರರೊಡನೆ ಹೋಲಿಕೆ ಮಾಡಬೇಡಿ. ನಿಮ್ಮನ್ನೇ ಹೋಲಿಕೆ ಮಾಡಿಕೊಂಡು ಮುಂದೆ ಸಾಗಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.


ಶಾಲಾ, ಕಾಲೇಜುಗಳಲ್ಲಿ ಕಲಿಯುವುದು ಶೇ.50ಭಾಗ ಮಾತ್ರ. ಉಳಿದ ಶೇ.50 ಭಾಗವನ್ನು ಬದುಕು ಕಲಿಸುತ್ತದೆ. ಅಂಕ, ಶೈಕ್ಷಣಿಕ ಶ್ರೇಷ್ಠತೆಯೇ ಯಶಸ್ವಿ ಬದುಕಿನ ಮಾನದಂಡವಲ್ಲ. ಕಡಿಮೆ ಅಂಕ ಪಡೆದವರು ಬದ್ಧತೆ, ಶ್ರಮ, ಶ್ರದ್ಧೆಯಿಂದ ದೊಡ್ಡ ಸಾಧಕರಾಗಬಹುದು. ಅಂಕದೊಂದಿಗೆ ಸಕಾರಾತ್ಮಕ ಮಾನಸಿಕ ಧೋರಣೆ ಅತ್ಯುತ್ತಮ ಜೋಡಿಯಾಗುತ್ತದೆ ಎಂದರು.