ಬೆಂಗಳೂರು: ವಿದ್ಯಾರ್ಥಿಗಳು ಕೈಗೊಳ್ಳುವ ಸಂಶೋಧನೆಗಳು ವೈಜ್ಞಾನಿಕವಾಗಿ ಸಮಾಜದ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವಂತಿರಬೇಕು’’ ಎಂದು ಎಸ್‌ವಿಐಟಿ ಪ್ರಾಂಶುಪಾಲ ಡಾ.ಎಂ.ಎಸ್. ಗಣೇಶ ಪ್ರಸಾದ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ರಾಜಾನುಕುಂಟೆಯಲ್ಲಿರುವ ಸಾಯಿ ವಿದ್ಯಾ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ ‘ಸಂವಹನ ಪ್ರಗತಿ ಹಾಗೂ ಕಂಪ್ಯೂಟಿಂಗ್ ತಂತಜ್ಞಾನ’ (ಐಎನ್‌ಒಎಸಿಸಿ-2025)’ ಕುರಿತ 3 ದಿನಗಳ ಅಂತಾರಾಷ್ಟ್ರೀಯ ಸಮ್ಮೇಳನ ಮಾತನಾಡಿದರು.
‘‘ವಿದ್ಯಾರ್ಥಿಗಳಲ್ಲಿ ಸುಪ್ತವಾದ ಪ್ರತಿಭೆ ಅಡಗಿರುತ್ತದೆ. ಇದರ ಬಗ್ಗೆ ಸಂವಹನ ನಡೆಸುವ ಮೂಲಕ ಅವರಿಗೆ ವೇದಿಕೆ ಕಲ್ಪಿಸಿಕೊಡುವುದು ನಮ್ಮೆಲ್ಲರ ಜವಾಬ್ದಾರಿ. ಹಾಗೆಯೇ ವಿದ್ಯಾರ್ಥಿಗಳು ಕೂಡ ಸಮಾಜಕ್ಕೆ ಉಪಯುಕ್ತವಾಗುವಂತಹ ಮತ್ತು ಸಂಪನ್ಮೂಲಗಳನ್ನು ಕಾಪಾಡುವಂತಹ ಹೊಸ ಹೊಸ ಪರಿಕಲ್ಪನೆಯೊಂದಿಗೆ ಪ್ರಯೋಗಗಳನ್ನು ಕೈಗೊಳ್ಳಬೇಕು. ಶೈಕ್ಷಣಿಕ ಸಂಸ್ಥೆಗಳು,ಕೈಗಾರಿಕೆಗಳನ್ನು ಒಟ್ಟುಗೂಡಿಸುವುದು ಸಮ್ಮೇಳನದ ಉದ್ದೇಶ. ಇದು ಸಂವಹನ, ಕಂಪ್ಯೂಟಿಂಗ್ ತಂತ್ರಜ್ಞಾನದಲ್ಲಿನ ಪ್ರಗತಿಯನ್ನು ಹೆಚ್ಚಿಸಲು ನೆರವಾಗಿದೆ’’ ಎಂದು ತಿಳಿಸಿದರು.
ಸಮ್ಮೇಳನದಲ್ಲಿ ವಿಶ್ವದ 25 ದೇಶಗಳಿಂದ 298ಕ್ಕೂ ಅಧಿಕ ಸಂಶೋಧಕರು, ಸಂಶೋಧನಾ ವಿದ್ಯಾರ್ಥಿಗಳು, 49ಕ್ಕೂ ಅಧಿಕ ತಂತ್ರಜ್ಞಾನ ಪರಿಣತರ ಒಳಗೊಂಡಂತೆ ಭೌತಿಕ, ಆನ್‌ಲೈನ್ ಮೂಲಕ ಸಾಕಷ್ಟು ಮಂದಿ ಭಾಗಿಯಾಗಿದ್ದರು. ಇದೇ ವೇಳೆ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು. ಸಂಸ್ಥಾಪನಾ ಟ್ರಸ್ಟಿ ಡಾ.ಎ.ಎಂ. ಪದ್ಮಾ ರೆಡ್ಡಿ, ಉಪ ಪ್ರಾಂಶುಪಾಲ ಡಾ. ಕೆ.ಲಕ್ಷ್ಮೀನಾರಾಯಣಚಾರಿ, ಐಎನ್‌ಒಎಸಿಸಿ 2025ರ ಕಾರ್ಯದರ್ಶಿ ಮತ್ತು ಪ್ರಚಾರ ಸಮಿತಿ ಅಧ್ಯಕ್ಷ ಡಾ. ಶಾಂತಕುಮಾರ್ ಬಿ.ಪಾಟೀಲ್ ಮತ್ತಿತರರಿದ್ದರು.