ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ಆಯೋಜಿಸಿದ್ದ 11 ದಿನಗಳ ಸಂಶೋಧನಾ ಕಾರ್ಯಾಗಾರವನ್ನು ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಕುಲಸಚಿವೆ ಜಯಲಕ್ಷ್ಮಿ ರಾಯ್ಕೋಡ ಉದ್ಘಾಟಿಸಿದರು. ಕುಲಸಚಿವ ಶಂಕರಗೌಡ ಸೋಮನಾಳ, ಪ್ರೊ. ರೇಣುಕಾ ಮೇಟಿ, ಪ್ರೊ. ರಾಜು ಬಾಗಲಕೋಟ ಮತ್ತಿತರರಿದ್ದಾರೆ.  
ಜಿಲ್ಲೆ

ಅಭಿವೃದ್ಧಿಗೆ ಸಂಶೋಧನೆ ಅಗತ್ಯ: ಕುಲಸಚಿವೆ ಜಯಲಕ್ಷ್ಮಿ ರಾಯ್ಕೋಡ

ವಿಜಯಪುರ: ಸಂಶೋಧನೆ ಎನ್ನುವುದು ನಿರ್ದಿಷ್ಟ ವಿಷಯವನ್ನು ಸಂಶೋಧಿಸುವ ವ್ಯವಸ್ಥಿತ ಮತ್ತು ವೈಜ್ಞಾನಿಕ ವಿಧಾನವಾಗಿದ್ದು, ಅಭಿವೃದ್ಧಿಗೆ ಸಂಶೋಧನೆ ಅಗತ್ಯ ಎಂದು ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಕುಲಸಚಿವೆ ಜಯಲಕ್ಷ್ಮಿ ರಾಯ್ಕೋಡ ಹೇಳಿದರು.

ಇಲ್ಲಿನ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಅಹಲ್ಯಾಬಾಯಿ ಸ್ನಾತಕೋತ್ತರ ಮಹಿಳಾ ಅಧ್ಯಯನ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ ಹಾಗೂ ಪಜಾ, ಪಪಂ ನಿರ್ದೇಶನಾಲಯದ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ 11 ದಿನಗಳ ಸಂಶೋಧನಾ ವೈಜ್ಞಾನಿಕತೆ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಸಂಶೋಧನೆಗಳ ಫಲ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಬೇಕು. ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಗೆ ಕಾರಣವಾಗಬೇಕು. ಸಂಶೋಧನೆಯ ಆಳಕ್ಕೆ ಇಳಿದಾಗ ಮಾತ್ರ ನಿಜವಾದ ಸಂಶೋಧನೆಗಳನ್ನು ಸಮಾಜಕ್ಕೆ ಕೊಡುಗೆಯಾಗಿ ಕೊಡಲು ಸಾಧ್ಯವಾಗುತ್ತದೆ. ಪ್ರೌಢ ಪ್ರಬಂಧಗಳು ಸರ್ಕಾರಕ್ಕೆ ಹಾಗೂ ನೀತಿರೂಪಕರಿಗೆ ಮಾರ್ಗದರ್ಶನ ನೀಡಿ ಮೈಲಿಗಲ್ಲಾಗಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಮಹಿಳಾ ವಿವಿಯ ಕುಲಸಚಿವ ಶಂಕರಗೌಡ ಸೋಮನಾಳ ಮಾತನಾಡಿ, ಮಹಿಳಾ ವಿಶ್ವವಿದ್ಯಾಲಯದ ಸಂಶೋಧನೆಗಳು ಮಹಿಳಾ ಸಮುದಾಯದ ಬದುಕನ್ನು ಸುಗಮಗೊಳಿಸಿ ಮಹಿಳಾ ಸಬಲೀಕರಣಕ್ಕೆ ದಾರಿ ಮಾಡಿಕೊಡಬೇಕು. ಸಂಶೋಧನಾರ್ಥಿಗಳಿಗೆ ಸಂಶೋಧನೆ ಮಾಡುವುದು ಒಂದು ಸುವರ್ಣ ಅವಕಾಶ ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಪ್ರೊ. ರೇಣುಕಾ ಮೇಟಿ, ಪ್ರೊ. ರಾಜು ಬಾಗಲಕೋಟ, ಪ್ರೊ.ವಿಷ್ಣು ಸಿಂಧೆ ಮತ್ತಿತರರಿದ್ದರು.
ಮಹಿಳಾ ಅಧ್ಯಯನ ಕೇಂದ್ರದ ನಿರ್ದೇಶಕಿ ಪ್ರೊ.ಲಕ್ಷ್ಮಿದೇವಿ ವೈ ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದರು. ಡಾ. ಸರೋಜಾ ಸಂತಿ ಅತಿಥಿಗಳನ್ನು ಪರಿಚಯಿಸಿದರು. ಡಾ. ಭಾಗ್ಯಶ್ರೀ ದೊಡಮನಿ ನಿರೂಪಿಸಿದರು. ಡಾ. ಭಾರತಿ ಗಾಣಿಗೇರ ವಂದಿಸಿದರು.