ರಾಯಚೂರು ಘಟಿಕೋತ್ಸವದಲ್ಲಿ ಸಂಶೋಧನ ವಿಭಾಗದಲ್ಲಿ ಮಾನ್ವಿ ಪಟ್ಟಣದ ಮಾನಸ ಎಸ್.ಜಿ. ಪಾಲಕರ ಚಿನ್ನದ ಪದಕ ಪಡೆದ ಖುಷಿಯಲ್ಲಿ. ತಂದೆ ರಾಜಶೇಖರ ಎಸ್.ಜಿ, ತಾಯಿ ವಿಜಯಲಕ್ಷ್ಮೀ ಇದ್ದರು. 
ಜಿಲ್ಲೆ

ಚಿನ್ನದ ಪದಕ ಗೆದ್ದ ಮಾನ್ವಿಯ ವಿದ್ಯಾರ್ಥಿನಿ

ಪ್ರವೀಣ ಉದುಸಾ ದಲಬಂಜನ್

ಮಾನ್ವಿ: ಪಟ್ಟಣದ ನಿವಾಸಿ, ವಿದ್ಯಾರ್ಥಿನಿ ಮಾನಸ ಎಸ್.ಜಿ ಸಂಶೋಧನಾ ವಿಭಾಗದಲ್ಲಿ ರಾಯಚೂರು ಕೃಷಿ ವಿವಿಯಲ್ಲಿ 12 ನೇ ಘಟಿಕೋತ್ಸವದಲ್ಲಿ ರಾಜ್ಯಪಾಲ ಥಾವರಚಂದ ಗೆಹಲೋತ್ ಅವರಿಂದ ಚ್ನಿನದ ಪದಕ ಪಡೆದು ಕೀರ್ತಿ ತಂದಿದ್ದಾರೆ. ಮಗಳ ಸಾಧನೆಗೆ ತಂದೆ ರಾಜಶೇಖರ ಎಸ್‌ಜಿ, ತಾಯಿ ವಿಜಯಲಕ್ಷ್ಮೀ ಸಂತಸ ವ್ಯಕ್ತಪಡಿಸಿದರು.

ರಾಸಾಯನಿಕ ಗೊಬ್ಬರ ಬಳಕೆಯಿಂದ 16 ಸೂಕ್ಷ್ಮ ಜೀವಿಗಳು ನಾಶ

ಡಾ.ಮಹಾದೇವ ಸ್ವಾಮಿ ಅವರ ಮಾರ್ಗದರ್ಶನದಲ್ಲಿ ಕೃಷಿ ಸೂಕ್ಷ್ಮ ಜೀವಿಶಾಸ್ತ್ರ ವಿಭಾಗದಲ್ಲಿ ಸಂಶೋಧನೆಯಲ್ಲಿ ಹೆಚ್ಚಿನ ಅಂಕಗಳನ್ನು ಪಡೆದ ಮಾನಸಗೆ ಚಿನ್ನದ ಪದಕ ಒಲಿದು ಬಂದಿದೆ. ವಿದ್ಯಾರ್ಥಿನಿ ಮಾನಸ ಎಸ್.ಜಿ. ಮಾತನಾಡಿ, ರೈತರು ಹೆಚ್ಚಾಗಿ ರಾಸಾಯನಿಕ ರಸಗೊಬ್ಬರವನ್ನು ಜಮೀನಿಗೆ ಹಾಕುತ್ತಿರುವುದರಿಂದ ಫಲವತ್ತತೆ ಹೋಗಲಿದೆ. ಅಲ್ಲದೆ ಇಳುವರಿ ಹೆಚ್ಚಿಸುವ 16 ಸೂಕ್ಷ್ಮ ಜೀವಿಗಳು ನಶಿಸಿ ಹೋಗುತ್ತಿವೆ. ಹೀಗಾಗಿ ಭೂಮಿ ಬರಡಾಗಿ ಪರಿವರ್ತನೆಯಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಪ್ರಕೃತಿಯಲ್ಲಿನ ಅನೇಕ ಸೂಕ್ಷ್ಮಣು ಜೀವಿಗಳು ಗಾಳಿ ಹಾಗೂ ಭೂಮಿಯಲ್ಲಿನ ಪೋಷಕಾಂಶಗಳನ್ನು ಬೆಳೆಗೆ ದೊರೆಯುವಂತೆ ಮಾಡುತ್ತವೆ. ವಿಜ್ಞಾನ ಪ್ರಯೋಗಾಲಯದಲ್ಲಿ ಸೂಕ್ಷ್ಮಣು ಜೀವಿಗಳನ್ನು ಅಭಿವೃದ್ಧಿಪಡಿಸಿ ಬೆಳೆಗೆ ಸಿಗುವಂತೆ ಮಾಡುವ ಮೂಲಕ ಭೂಮಿಯ ಫಲವತ್ತತೆ ಹೆಚ್ಚಾಗಲಿದೆ. ಅಲ್ಲದೆ ಕೃಷಿ ವೆಚ್ಚವನ್ನು ತಗ್ಗಲಿದೆ. ಈ ಕುರಿತು ಇನ್ನು ಹೆಚ್ಚಿನ ಉನ್ನತ ಸಂಶೋಧನೆ ನಡೆಸುವ ಉದ್ದೇಶ ಹೊಂದಲಾಗಿದೆ. ರೈತರಿಗೆ ನೈಸರ್ಗಿಕ ಕೃಷಿ ನಡೆಸಲು ರೈತರನ್ನು ಉತ್ತೇಜಿಸುವುದು ಮುಂದಿನ ಗುರಿಯಾಗಿದೆ ಎಂದರು.