ಜಿಲ್ಲೆ

ಗುಂಡಿಗೆ ಬಿದ್ದಿದ್ದ ಎತ್ತು-ರೈತನ ರಕ್ಷಣೆ

ಲಕ್ಷ್ಮೇಶ್ವರ: ಜಮೀನುಗಳಿಗೆ ಸಂಪರ್ಕ ಕಲ್ಪಿಸುವ ಲಕ್ಷ್ಮೇಶ್ವರ- ಯಳವತ್ತಿ ರಸ್ತೆ ಸಂಪೂರ್ಣ ಹಾಳಾಗಿದೆ. ರೈತರು ಹೊಲಕ್ಕೆ ಹೋಗಿ-ಬರಲಾರದ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಆಕ್ರೋಶಗೊಂಡಿರುವ ರೈತರು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ವಿರುದ್ಧ ಭಾನುವಾರ ಹರಿಹಾಯ್ದಿದ್ದಾರೆ.

ಅತ್ಯಂತ ಕಡಿದಾದ ರಸ್ತೆ, ರಸ್ತೆಯುದ್ದಕ್ಕೂ ಮುಳ್ಳುಕಂಟಿಗಳು, ರಸ್ತೆ ಮಧ್ಯೆ ವಿದ್ಯುತ್ ಕಂಬಗಳು, ರಸ್ತೆಗೆ ಅಡ್ಡಲಾಗಿ ಹಾಕಿರುವ ಕಿರು ಸೇತುವೆ ಪೈಪ್‌ಗಳು ಕಿತ್ತು ಅಲ್ಲಲ್ಲಿ ಕೊರಕಲು ಉಂಟಾಗಿವೆ. ಮಳೆಯಿಂದಾಗಿ ರಸ್ತೆ ಸಂಪೂರ್ಣ ಕೆಸರಿನಿಂದ ಕೂಡಿ ಕಳೆದ 1 ತಿಂಗಳಿಂದ ಎತ್ತು-ಚಕ್ಕಡಿ, ಟ್ರಾೃಕ್ಟರ್, ಬೈಕ್ ಹೋಗದಂತಾಗಿವೆ. ಭಾನುವಾರ ಈ ರಸ್ತೆಯಲ್ಲಿ ಚಕ್ಕಡಿ ಹೋಗಲಾಗದೇ ರಸ್ತೆ ಪಕ್ಕದ ಗುಂಡಿಗೆ ಬಿದ್ದಿದ್ದನ್ನು ಗಮಿನಿಸಿ ರೈತರು ರಕ್ಷಣೆ ಮಾಡಿದ್ದರಿಂದ ಎತ್ತು ಮತ್ತು ರೈತ ಅಪಾಯದಿಂದ ಪಾರಾಗಿದ್ದಾರೆ.

‘ವರ್ಷದುದ್ದಕ್ಕೂ ಇಲ್ಲಿ ಕಷ್ಟ ಅನುಭವಿಸುವುದು ತಪ್ಪುತ್ತಿಲ್ಲ. ಕಳೆದ ವರ್ಷ ಇದೇ ದಾರಿಯಲ್ಲಿ ಟ್ರ್ಯಾಕ್ಟರ್ ಬಿದ್ದು ಗೊಜನೂರಿನ ರೈತ ಮೃತಪಟ್ಟಿದ್ದಾನೆ. ಜಮೀನಿಗೆ ತೆರಳಿ ಕೃಷಿ ಚಟುವಟಿಕೆ ಮಾಡಲಾಗುತ್ತಿಲ್ಲ. ಬೆಳೆಗಿಂತ ಕಳೆಯೇ ಹೆಚ್ಚಾಗಿದ್ದು ಅನೇಕ ರೈತರ ಜಮೀನುಗಳು ಪಾಳು ಬಿದ್ದಿವೆ. ಈ ಬಗ್ಗೆ ಜನಪ್ರತಿನಿಧಿಗಳು, ಅಧಿಕಾರಿಗಳನ್ನು ಕೇಳಿದರೆ ಜಾರಿಕೊಳ್ಳುತ್ತಿದ್ದು ರೈತರ ಗೋಳು ಯಾರೂ ಕೇಳುತ್ತಿಲ್ಲ. ಸುಮಾರು 15 ದಿನಗಳಲ್ಲಿ ಹೆಸರು, ಶೇಂಗಾ ಫಸಲು ಕಟಾವಿಗೆ ಬರಲಿದೆ. ಸ್ಥಳೀಯ ಶಾಸಕರು, ಸಂಸದರು ಹಾಗೂ ಅಧಿಕಾರಿಗಳು ಇತ್ತ ಗಮನ ಹರಿಸಿ ರಸ್ತೆಯನ್ನು ದುರಸ್ತಿಪಡಿಸಬೇಕು’ ಎಂದು ರೈತರು ಆಗ್ರಹಿಸಿದರು.

ರೈತರಾದ ಡಿ.ಬಿ. ಬಳಿಗಾರ, ಸುಭಾನ ಹೊಂಬಾಳ, ಮಹಾದೇವಪ್ಪ ಅಂದಲಗಿ, ನಿಂಗಪ್ಪ ಮುಳಗುಂದ, ಸಂತೋಷ ಕಾಶೆಟ್ಟಿ, ರಾಮಣ್ಣ ಮುಳಗುಂದ, ಹನೀಫಸಾಬ್ ಸೂರಣಗಿ, ಫಕೀರಪ್ಪ ಉಮಚಗಿ, ಮಹಾದೇವಪ್ಪ ಉಮಚಗಿ, ಮಲ್ಲಪ್ಪ ಉಮಚಗಿ, ಶೇಖಪ್ಪ ಮುಳುಗುದ,,ಶಿವನಗೌಡ ಪಾಣಿಗಟ್ಟಿ, ಪ್ರಶಾಂತ ಉಮಚಗಿ,, ರಬ್ಬನಿಸಾಬ್ ಸೂರಣಗಿ, ನಜೀರಾ ಸೂರಣಗಿ, ರಾಜು ಉಮಚಗಿ, ಇತರರಿದ್ದರು.

ರಾಮಣ್ಣ ಲಮಾಣಿ ಶಾಸಕರಾಗಿದ್ದ ವೇಳೆ ಈ ರಸ್ತೆಯನ್ನು ಒಂದಷ್ಟು ದುರಸ್ತಿಗೊಳಿಸಲಾಗಿತ್ತು. ತಾಲೂಕಿನಲ್ಲಿನ ಬಹುತೇಕ ರೈತ ಸಂಪರ್ಕ, ಗ್ರಾಮೀಣ ಭಾಗದ ರಸ್ತೆಗಳು ಹಾಳಾಗಿದ್ದು, ಶಾಸಕರು, ಅಧಿಕಾರಿಗಳು ತಾತ್ಕಾಲಿಕ ರಸ್ತೆಯನ್ನಾದರೂ ನಿರ್ಮಿಸಿ ಸಂಚರಿಸಲು ಅನುಕೂಲ ಮಾಡಿಕೊಡಬೇಕು.I ಮಂಜುನಾಥ ಮಾಗಡಿ, ರೈತ