ನರೇಗಲ್ಲ: ಸಮೀಪದ ಜಕ್ಕಲಿ ಗ್ರಾಮದ ಮೆಣಸಗಿಯವರ ಓಣಿಯ ಪಾಳುಬಿದ್ದ ಹಳೇ ಬಾವಿಯಲ್ಲಿ ಆಕಸ್ಮಿಕವಾಗಿ ಬಿದ್ದ ಸಾಕು ಬೆಕ್ಕನ್ನು ಅಗ್ನಿಶಾಮಕ ಸಿಬ್ಬಂದಿ ಹಾಗೂ ಸ್ಥಳೀಯರು ರಕ್ಷಿಸಿದ್ದಾರೆ.
ಮಹೇಶ ಮೇಟಿಯವರ ಮನೆ ಬಳಿಯ ಬಾವಿಯಲ್ಲಿ ವಾರದ ಹಿಂದೆಯೇ ಬೆಕ್ಕು ಬಿದ್ದಿದೆ. ಆಳ ಹಾಗೂ ಹಳೆಯದಾಗಿರುವ ಬಾವಿಯಿಂದ ಮೇಲೆ ಬರಲಾಗದೆ ಪರದಾಡಿದೆ. ಸ್ಥಳೀಯರಿಗೆ ಅದನ್ನು ರಕ್ಷಿಸಲು ಯಾವುದೇ ಅವಕಾಶ ಇಲ್ಲದಂತಾಗಿತ್ತು. ಬಾವಿಯಲ್ಲಿ ಬಿದ್ದಂದಿನಿಂದ ಬೆಕ್ಕಿನ ಗೋಳಾಟಕ್ಕೆ ಮರುಗಿದ ಓಣಿ ಜನರು ದಿನಾಲೂ ಹಾಲು, ನೀರು, ಅನ್ನವನ್ನು ಬಕೆಟ್ ಸಹಾಯದ ಮೂಲಕ ಬೆಕ್ಕಿಗೆ ಪೂರೈಸಿದ್ದಾರೆ. ಸ್ಥಳೀಯ ಶೇಖರ ಯಾವಗಲ್ಲ ಎಂಬುವವರು ಅರಣ್ಯ ಇಲಾಖೆ ಅಧಿಕಾರಿಗಳನ್ನು ಸಂರ್ಪಸಿ ವಿಷಯ ತಿಳಿಸಿದ್ದಾರೆ. ಅಗ್ನಿಶಾಮಕ ಠಾಣಾಧಿಕಾರಿ ಗ್ಯಾನಪ್ಪ ಹನಮಪ್ಪ ಮಾಗಿ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಆಗಮಿಸಿ, ಗ್ರಾಮಸ್ಥರ ಸಹಕಾರದೊಂದಿಗೆ ಕಾರ್ಯಾಚರಣೆ ನಡೆಸಿ ಬೆಕ್ಕನ್ನು ರಕ್ಷಿಸಿದ್ದಾರೆ.
ಗ್ರಾಮದ ಕಳಕಪ್ಪ ಹೂಗರಿ, ಸಿಬ್ಬಂದಿ ವಿನಾಯಕ ಉಮತಾರ, ವಿನಾಯಕ ಅಥಣಿ, ರವಿ ಆದಿ, ಸಮರ್ಥ ಮೇಟಿ, ಪ್ರಭುರಾಜ ರೇಣುಕಮಠ, ಮುತ್ತುರಾಜ ಮೇಟಿ, ವಿಶ್ವನಾಥ ಬುಳ್ಳಾ ಶಿವಾನಂದ ಯಾವಗಲ್ಲ, ಇದ್ದರು.