ಗೋಕರ್ಣ: ಇಲ್ಲಿನ ಮುಖ್ಯ ಸಮುದ್ರದಲ್ಲಿ ಈಜಲು ಇಳಿದು ಅಪಾಯಕ್ಕೆ ಈಡಾಗಿದ್ದ ಹುಬ್ಬಳ್ಳಿಯ ಐವರು ಮಕ್ಕಳು ಸೇರಿ ಒಟ್ಟು 7 ಜನರಿದ್ದ ಕುಟುಂಬವನ್ನು ಕರ್ತವ್ಯದಲ್ಲಿದ್ದ ಲೈಫ್‌ಗಾರ್ಡ್‌ಗಳು ರಕ್ಷಿಸಿ ನೀರಿನಿಂದ ಮೇಲಕ್ಕೆ ತಂದ ಘಟನೆ ಮಂಗಳವಾರ ನಡೆದಿದೆ.
ಮಕ್ಕಳು ಸೇರಿದಂತೆ ಕುಟುಂಬದವರೆಲ್ಲ ಸೇರಿ ನೀರಿನಲ್ಲಿ ಆಟವಾಡುತ್ತ ತೆರೆಯ ರಭಸಕ್ಕೆ ಸಿಕ್ಕು ಕೊಚ್ಚಿ ಹೋಗಿ ಮುಳುಗುವ ಹಂತದಲ್ಲಿದ್ದರು. ಇದನ್ನು ಕರ್ತವ್ಯದಲ್ಲಿದ್ದ ಸಿಬ್ಬಂದಿ ಶಿವಪ್ರಸಾದ ಅಂಬಿಗ, ಲೋಕೇಶ ಹರಿಕಂತ್ರ, ಮೇಲ್ವಿಚಾರಕ ರವಿ ನಾಯ್ಕ ಗಮನಿಸಿ ತಕ್ಷಣ ಕಾರ್ಯ ಪ್ರವೃತ್ತರಾದರು. ಹುಬ್ಬಳ್ಳಿಯ ಒಂದೇ ಕುಟುಂಬದವರಾದ ಪರಶುರಾಮ(44), ರುಕ್ಮಿಣ(38), ಧೀರಜ್(14), ಅಕ್ಷರ(14), ಖುಷಿ(13), ದೀಪಿಕಾ(12) ಮತ್ತು ನಂದಕಿಶೋರ(10) ರಕ್ಷಿಸಲ್ಪಟ್ಟವರು.