ಎಚ್.ಡಿ.ಕೋಟೆ: ಕಸಾಯಿಖಾನೆಗೆ ಸಾಗಿಸುತ್ತಿದ್ದ ವಾಹನವನ್ನು ಸೀಜ್ ಮಾಡಿ 35 ಜಾನುವಾರುಗಳನ್ನು ಪಟ್ಟಣ ಪೊಲೀಸ್ ಠಾಣೆ ಪೊಲೀಸರು ರಕ್ಷಿಸಿದ್ದಾರೆ.
ಮಂಗಳವಾರ ಮುಂಜಾನೆ ಹುಣಸೂರು ತಾಲೂಕಿನ ಗದ್ದಿಗೆ ಮಾರ್ಗವಾಗಿ ಹೊಮ್ಮರಗಳ್ಳಿ ಗ್ರಾಮದಿಂದ ನಂಜನಗೂಡು ತಾಲೂಕು ಹುಲ್ಲಹಳ್ಳಿ ಕಡೆಗೆ ಈಚರ್ ವಾಹನ ಅನುಮಾನಾಸ್ಪದವಾಗಿ ತೆರಳುತ್ತಿತ್ತು. ಖಚಿತ ಮಾಹಿತಿ ಮೇರೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಹುಣಸೂರು ಡಿವೈಎಸ್ಪಿ ಅವರ ಮಾರ್ಗದರ್ಶನದಲ್ಲಿ ಎಚ್.ಡಿ.ಕೋಟೆ ಪೊಲೀಸ್ ಠಾಣಿ ಪೊಲೀಸ್ ಇನ್ಸ್‌ಪೆಕ್ಟರ್ ನೇತೃತ್ವದಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಯಿತು.
ಮೈಸೂರು-ಮಾನಂದವಾಡಿ ರಸ್ತೆಯಲ್ಲಿ ವಾಹನ ನಿಂತಿರುವ ಬಗ್ಗೆ ಮಾಹಿತಿ ಪಡೆದು ಕೂಡದೇ ದಾಳಿ ನಡೆಸಿದರು. ಈ ವೇಳೆ ಪೊಲೀಸರನ್ನು ಕಂಡು ಚಾಲಕ ಪರಾರಿಯಾಗಿದ್ದು, ವಾಹನದಲ್ಲಿದ್ದ 35 ಜಾನುವಾರುಗಳನ್ನು ರಕ್ಷಿಸಲಾಗಿದ್ದು, ಒಂದು ರಾಸು ಮೃತಪಟ್ಟಿದೆ. ಮೈಸೂರಿನ ಪಿಂಜರಾಪೋಲ್‌ಗೆ 35 ರಾಸುಗಳನ್ನು ಬಿಡಲಾಗಿದ್ದು, ವಾಹನ ವಶಕ್ಕೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.