ರಕ್ಷಿಸಲಾದ ನಾಗರಹಾವಿನ ಮರಿಗಳು ಹಾಗೂ ತಾಯಿ ಹಾವು 
ಜಿಲ್ಲೆ

ನಾಗರಹಾವಿನ 26 ಮರಿಗಳ ರಕ್ಷಣೆ

ಪ್ರಮುಖ ಮುಖ್ಯಾಂಶಗಳು

  • ಮನೆಯ ಗೋಡೆಯಲ್ಲಿ ತಾಯಿ ಹಾವಿನ ಜತೆಗಿದ್ದ ಮರಿಗಳು
  • ನೆರಿಯ ಗ್ರಾಮದ ಕುಡುಮಡ್ಕದಲ್ಲಿ ಪತ್ತೆ
ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ನೆರಿಯ ಗ್ರಾಮದ ಕುಡುಮಡ್ಕದ ಮನೆಯೊಂದರ ಗೋಡೆಯಲ್ಲಿ ಪತ್ತೆಯಾದ 26 ನಾಗರಹಾವಿನ ಮರಿ ಹಾಗೂ ತಾಯಿ ಹಾವನ್ನು ರಕ್ಷಿಸಿ ಅರಣ್ಯ ಪ್ರದೇಶಕ್ಕೆ ಸುರಕ್ಷಿತವಾಗಿ ಬಿಡಲಾಗಿದೆ.
ಮನೆಯ ಗೋಡೆಯಲ್ಲಿ ಕೆಲವು ದಿನಗಳಿಂದ ನಾಗರಹಾವು ಸುಳಿದಾಡುವುದನ್ನು ಕಂಡ ಶ್ರೀನಿವಾಸಗೌಡ ಎಂಬುವರು ಕಕ್ಕಿಂಜೆಯ ಉರಗಮಿತ್ರ, ಶ್ರೀ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ತಂಡದ ಸದಸ್ಯ ಸ್ನೇಕ್​ ಅನಿಲ್​ ಅವರಿಗೆ ಬುಧವಾರ ಮಾಹಿತಿ ನೀಡಿದರು. ಅವರು ಆಗಮಿಸಿ ತಾಯಿ ನಾಗರಹಾವನ್ನು ಹಿಡಿದಿದ್ದು, ಈ ವೇಳೆ ಗೋಡೆಯಲ್ಲಿ ಮರಿಗಳು ಕಂಡು ಬಂದವು.

ಸುರಕ್ಷಿತ ಜಾಗದಲ್ಲಿ ಬಿಡುಗಡೆ:

ಗೋಡೆಯಲ್ಲಿದ್ದ 26 ಮರಿಗಳನ್ನು ಹಿಡಿದು ಅವುಗಳನ್ನು ತಾಯಿ ಸಹಿತ ಚಾರ್ಮಾಡಿ ಘಾಟಿಯ ಅರಣ್ಯ ಪ್ರದೇಶದ ಸುರಕ್ಷಿತ ಜಾಗದಲ್ಲಿ ಗುರುವಾರ ಬಿಡಲಾಗಿದೆ. ಈ ವೇಳೆ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಸ್ಥಳೀಯರು ಸಹಕರಿಸಿದರು. ಈ ಮರಿಗಳು ಸುಮಾರು 10 ದಿನಗಳ ಹಿಂದೆ ಮೊಟ್ಟೆಯಿಂದ ಹೊರಬಂದಿರಬಹುದು ಎಂದು ಅಂದಾಜಿಸಲಾಗಿದ್ದು, ಎಲ್ಲವೂ ಆರೋಗ್ಯಪೂರ್ಣವಾಗಿ ಇರುವುದಾಗಿ ಅನಿಲ್​ ತಿಳಿಸಿದ್ದಾರೆ.
16 ಮೊಟ್ಟೆಗಳಿಗೆ ಕೃತಕ ಕಾವು:
ಕೆಲವು ದಿನಗಳ ಹಿಂದೆ ನೆರಿಯ ಗ್ರಾಮದ ಗುಂಡಿಕಂಡ ಎಂಬಲ್ಲಿ ಮನೆಯ ಗೋಡೆಯೊಂದರಲ್ಲಿ ಪತ್ತೆಯಾಗಿದ್ದ ನಾಗರಹಾವಿನ 16 ಮೊಟ್ಟೆಗಳನ್ನು ಅನಿಲ್​ ಅವರು ರಕ್ಷಿಸಿ ಅವುಗಳಿಗೆ ಕೃತಕ ಕಾವು ನೀಡಿ ಮರಿಗಳು ಹೊರಬಂದ ಬಳಿಕ ಭಾನುವಾರ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದರು. ಈ ಮೊಟ್ಟೆಗಳನ್ನು ಇರುವೆಗಳ ದಾಳಿಯಿಂದ ರಕ್ಷಿಸಲಾಗಿತ್ತು.