ಕೆ.ಆರ್.ಸಾಗರ: ಗೂಡ್ಸ್ ಆಟೋಗಳಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದವರನ್ನು ಪೊಲೀಸರು ತಡೆದು, ಆರು ಆರೋಪಿಗಳನ್ನು ಬಂಧಿಸಿ, 21 ಜಾನುವಾರುಗಳನ್ನು ರಕ್ಷಿಸಿದ್ದಾರೆ.
ಚಾಲಕರಾದ ಮಂಜುನಾಥ, ನದೀಮ್, ಭೀಮರಾಜು, ಸಾಬ್‌ವುದ್ದಿನ್, ಬಸವರಾಜು ಹಾಗೂ ಅಮೀಪ್ ಪಾಷ್ ಬಂಧಿತ ಆರೋಪಿಗಳು.
ಕೆ.ಆರ್.ಸಾಗರ ಪೊಲೀಸ್ ಠಾಣೆಯ ಪಿಎಸ್ಸೈ ಬಸವರಾಜು ಬುಧವಾರ ಬೆಳಗ್ಗೆ ಖಚಿತ ಮಾಹಿತಿ ಮೇರೆಗೆ ಕೆ.ಆರ್.ಸಾಗರ-ಮೈಸೂರು ರಸ್ತೆಯಲ್ಲಿರುವ ಪಂಪ್‌ಹೌಸ್ ಸರ್ಕಲ್ ಬಳಿ ಇಲವಾಲ ಕಡೆಯಿಂದ ಬರುತ್ತಿದ್ದ 6 ಗೂಡ್ಸ್ ಆಟೋಗಳನ್ನು ತಡೆದು ತಪಾಸಣೆ ನಡೆಸಿದಾಗ 21 ಜಾನುವಾರುಗಳನ್ನು ತುಂಬಿ ಸಾಗಿಸುತ್ತಿದ್ದುದು ಗೊತ್ತಾಯಿತು. ನಂತರ ಆರೋಪಿಗಳನ್ನು ಬಂಧಿಸಿ ಜಾನುವಾರುಗಳನ್ನು ರಕ್ಷಣೆ ಮಾಡಲಾಯಿತು.
ಜಾನುವಾರುಗಳನ್ನು ಚುಂಚನಕಟ್ಟೆಯಿಂದ ತಂದಿರುವುದಾಗಿ ಚಾಲಕರು ಪೊಲೀಸರಿಗೆ ತಿಳಿಸಿದ್ದಾರೆ. ಜಾನುವಾರುಗಳನ್ನು ಕಸಾಯಿಖಾನೆಗೆ ಕೊಂಡೊಯ್ಯುತ್ತಿದ್ದುದಾಗಿ ಮಾಹಿತಿ ನೀಡಿದ ಮೇರೆಗೆ ಕೆ.ಆರ್.ಸಾಗರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ಆರೋಪಿಗಳನ್ನು ಶ್ರೀರಂಗಪಟ್ಟಣ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದಾರೆ.
ಜಾನುವಾರುಗಳನ್ನು ಮಂಡ್ಯದ ಕಾಮಧೇನು ಗೋಶಾಲೆಯ ವಶಕ್ಕೆ ಪೊಲೀಸರು ನೀಡಿದ್ದಾರೆ. ಪೋಲಿಸರ ಜತೆಗೂಡಿದ ಸ್ಥಳೀಯ ಬಜರಂಗದಳ ಯುವಕರ ತಂಡ ಜಾನುವಾರುಗಳಿಗೆ ನೀರು ಮತ್ತು ಮೇವು ನೀಡಿ ಆರೈಕೆ ಮಾಡಿದರು. ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಪಿಎಸ್ಸೈ ಬಸವರಾಜು, ಸಿಬ್ಬಂದಿ ದೇವರಾಜು, ಶ್ರೀಧರ್, ಯದುರಾಜ್, ಮಂಜೇಗೌಡ, ರವೀಶ್, ಪ್ರಭು, ಚಾಲಕ ಸಂತೋಷ್ ಭಾಗವಹಿಸಿದ್ದರು.