ಬ್ಯಾಡಗಿ: ಪಟ್ಟಣದಲ್ಲಿನ ಕುಡಿಯುವ ನೀರಿನ ಜಲಾಗಾರ ಶುಚಿಗೊಳಿಸುವುದು ಮತ್ತಿತರ ಬೇಡಿಕೆ ಈಡೇರಿಸಬೇಕು ಎಂದು ಭ್ರಷ್ಟಾಚಾರ ನಿರ್ಮೂಲನೆ ಸಮಿತಿ ಹಾಗೂ ತಾಲೂಕು ನಿವೃತ್ತ ನೌಕರರ ಸಂಘದ ಸದಸ್ಯರು ಪುರಸಭೆ ಮುಖ್ಯಾಧಿಕಾರಿ ವಿನಯಕುಮಾರ ಹೊಳೆಯಪ್ಪಗೋಳ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.
ಜಲಾಗಾರಗಳ ತಳಭಾಗದಲ್ಲಿ ತಿಳಿಮಣ್ಣು ಸಂಗ್ರಹಗೊಂಡಿದ್ದು, ನೀರು ಅಶುದ್ದಗೊಳಿಸುತ್ತಿದೆ. ಕಾರಣ ಪುರಸಭೆ ಅಧಿಕಾರಿಗಳು ಕೂಡಲೇ ಜಲಾಗಾರಗಳಿಗೆ ಭೇಟಿ ನೀಡಿ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು. 2016ರಲ್ಲಿ ಪುರಸಭೆ 10 ಎಕರೆ ಭೂಮಿಯನ್ನು ವಸತಿ ನಿವೇಶನ ಹಂಚಿಕೆಗಾಗಿ ಖರೀದಿಸಿದೆ. ಆದರೆ ಈವರೆಗೂ ಒಬ್ಬರಿಗೂ ನಿವೇಶನ ನೀಡಿಲ್ಲ. 407 ನಿವೇಶನಗಳ ಪೈಕಿ 280 ನಿವೇಶನಗಳನ್ನು ಹಂಚಿಕೆ ಮಾಡಲು ಹಕ್ಕುಪತ್ರ ಸಿದ್ಧಪಡಿಸಿದ್ದು, ಬಹುತೇಕರು ಅನರ್ಹರಿದ್ದಾರೆ. ಪರಿಶೀಲಿಸಿ ಬಡವರಿಗೆ ನ್ಯಾಯ ಒದಗಿಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಮನವಿ ಸ್ವೀಕರಿಸಿದ ಪುರಸಭೆ ಮುಖ್ಯಾಧಿಕಾರಿ, ಜಲಾಗಾರಗಳಿಗೆ ಭೇಟಿ ನೀಡಿ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. ನಿವೇಶನ ಸಮಸ್ಯೆ ಕುರಿತು ಸ್ಥಳೀಯ ಶಾಸಕರ ಗಮನಕ್ಕೆ ತರಲಾಗುವುದು ಎಂದರು.
ಭ್ರಷ್ಟಾಚಾರ ನಿರ್ಮೂಲನೆ ಸಮಿತಿ ಸಂಚಾಲಕ ಮಲ್ಲೇಶಪ್ಪ ಚಿಕ್ಕಣ್ಣನವರ, ನಿವೃತ್ತ ನೌಕರರ ಸಂಘದ ಅಧ್ಯಕ್ಷ ಎಸ್.ಎಸ್.ಬಿದರಿ, ಕೆ.ಎನ್.ಹುಚ್ಚೇರ, ಸಿ. ಶಿವಾನಂದಪ್ಪ, ಜಿ.ಎಸ್. ಶಿರಗಂಬಿ, ಎಂ.ಕೆ. ಹೊಸಮನಿ, ಎಸ್.ಎಲ್. ತೆಂಬದ, ಬಿ. ಕೋರಿಶೆಟ್ಟರ, ರಾಮಣ್ಣ ಉಕ್ಕುಂದ, ಮಂಜಣ್ಣ ಬಣಕಾರ, ಮಹೇಶ ಗಾಜೇರ, ದುರ್ಗೆಶ ಗೋಣೆಮ್ಮನವರ, ಮಜೀದ್ ಮುಲ್ಲಾ, ಮಹಾಂತೇಶ ಹಳ್ಳಿ ಇದ್ದರು.