ಬೆಂಗಳೂರು: ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಮೂಲಸೌಕರ್ಯ ಚಟುವಟಿಕೆ ಮೇಲೆ ನಿಗಾ ಇಡಲು ಮೇಲ್ವಿಚಾರಣಾ ಸಮಿತಿಯೊಂದನ್ನು ರಚಿಸುವಂತೆ ಎನ್‌ಪಿಕೆಎಲ್ ಮುಕ್ತ ವೇದಿಕೆಯು ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರಕ್ಕೆ (ರೇರಾ - ಕರ್ನಾಟಕ) ಮನವಿ ಮಾಡಿದೆ.
ಬಿಡಿಎ ನಿರ್ಮಿಸುತ್ತಿರುವ ಕೆಂಪೇಗೌಡ ಲೇಔಟ್‌ನಲ್ಲಿ ವಿವಿಧ ಕಾಮಗಾರಿಗಳ ಅನುಷ್ಠಾನದಲ್ಲಿ ವಿಳಂಬದ ಬಗ್ಗೆ ದಾಖಲಾಗಿರುವ ದೂರು ವಿಚಾರಣೆ ಬುಧವಾರ ನಡೆಯಿತು. ವೇದಿಕೆ ಪರ ಪದಾಧಿಕಾರಿಗಳು ಮಾತನಾಡಿ, ಬಿಡಿಎ ಕೈಗೆತ್ತಿಕೊಂಡಿರುವ ಶಿವರಾಮ ಕಾರಂತ ಲೇಔಟ್ ರಚನೆ ವಿಚಾರದಲ್ಲಿ ಸುಪ್ರೀಂಕೋರ್ಟ್ ಸೂಚನೆಯಂತೆ ಚಂದ್ರಶೇಖರ್ ಸಮಿತಿ ಮೇಲ್ವಿಚಾರಣೆ ನಡೆಸಿದೆ. ಇದರಿಂದ ಅಲ್ಲಿ ಕೆಲಸಗಳು ಪ್ರಗತಿಯಲ್ಲಿವೆ. ಇದೇ ರೀತಿ ಕೆಂಪೇಗೌಡ ಬಡಾವಣೆಯಲ್ಲೂ ಕಾಮಗಾರಿಯನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಲು ಮೇಲ್ವಿಚಾರಣೆ ಸಮಿತಿ ರಚಿಸುವುದು ಸೂಕ್ತ ಎಂದು ಅಹವಾಲು ಸಲ್ಲಿಸಿತು.
ಇದಕ್ಕೆ ಪ್ರತಿಕ್ರಿಯಿಸಿದ ರೇರಾ ಮುಖ್ಯಸ್ಥರು, ಕಾರಂತ ಬಡಾವಣೆ ಪ್ರಕರಣ ಬೇರೆ ರೀತಿ ಇದೆ. ಅದರಂತೆ ಕೆಂಪೇಗೌಡ ಬಡಾವಣೆಗೂ ಸಮಿತಿ ರಚಿಸಲು ಸಂಸ್ಥೆಗೆ ಅಧಿಕಾರವಿಲ್ಲ. ಆದರೆ, ಬೇರೆ ಸ್ವರೂಪದಲ್ಲಿ ನಮ್ಮ ಇತಿಮಿತಿಯಲ್ಲಿ ಮೂಲಸೌಕರ್ಯ ಉಸ್ತುವಾರಿಗೆ ಸಮಿತಿ ರಚಿಸುವ ಕುರಿತು ಮುಂದಿನ ವಿಚಾರಣೆ ವೇಳೆ ಅಭಿಪ್ರಾಯ ತಿಳಿಸುವುದಾಗಿ ಭರವಸೆ ನೀಡಲಾಯಿತು.
ವಿಳಂಬ ಪರಿಹಾರಕ್ಕೆ ಮನವಿ:
ಕೆಂಪೇಗೌಡ ಲೇಔಟ್ ರಚನೆ ಆರಂಭವಾಗಿ 9 ವರ್ಷಗಳೇ ಮುಗಿಯುತ್ತಾ ಬಂದಿದ್ದರೂ, ಮೂಲಸೌಕರ್ಯ ಕಾಮಗಾರಿ ಪೂರ್ಣಗೊಂಡಿಲ್ಲ. ಇದರಿಂದ ಸೈಟ್‌ದಾರರು ಸೂರು ನಿರ್ಮಿಸಿಕೊಳ್ಳಲು ಸಾಧ್ಯವಾಗಿಲ್ಲ. ನಮ್ಮದಲ್ಲದ ತಪ್ಪಿಗೆ ಬ್ಯಾಂಕ್ ಸಾಲಕ್ಕೆ ಇಎಂಐ ಪಾವತಿ ಹೊರೆಯಾಗುತ್ತಿದೆ. ಹಾಗಾಗಿ ಬಿಡಿಎನಿಂದ ನಿವೇಶನದಾರರಿಗೆ ವಿಳಂಬ ಪರಿಹಾರ ಕೊಡಿಸಬೇಕು ಎಂದು ವೇದಿಕೆಯು ವಾದ ಮುಂದಿಟ್ಟಿದೆ. ಈ ಬಗ್ಗೆ ರೇರಾ ಪರಿಶೀಲಿಸಿ ಮಾಹಿತಿ ನೀಡುವುದಾಗಿ ಹೇಳಿ ವಿಚಾರಣೆಯನ್ನು ಮುಂದಿನ ತಿಂಗಳಿಗೆ ಮುಂದೂಡಿತು.
ವಿಚಾರಣೆಗೆ ಬಿಡಿಎ ಅಭಿಯಂತರ ಸದಸ್ಯ ಎಚ್.ಆರ್.ಶಾಂತಾರಾಜಣ್ಣ, ಕೆಂಪೇಗೌಡ ಲೇಔಟ್ ಕಾಮಗಾರಿ ಉಸ್ತುವಾರಿ ಇಂಜಿನಿಯರ್, ವೇದಿಕೆಯ ಗೌರವ ಅಧ್ಯಕ್ಷ ಶ್ರೀಧರ್ ನುಗ್ಗೇಹಳ್ಳಿ, ಕಾರ್ಯದರ್ಶಿ ಎಂ.ಅಶೋಕ್ ಹಾಜರಿದ್ದರು.