ಜಿಲ್ಲೆ

ಭೂ ವರ್ಗಾವಣೆ ನಿಷೇಧ ಕಾಯ್ದೆ ತಿದ್ದಪಡಿಯಾಗಲಿ

ಶಿವರಾಜ.ಎಂ

ವಿಜಯವಾಣಿ ಸುದ್ದಿಜಾಲ ಆನೇಕಲ್
ಪ.ಜಾತಿ ಮತ್ತು ಪಂಗಡಗಳ 1978-79ರ ಭೂಮಿ ವರ್ಗಾವಣಾ ನಿಷೇಧ ಕಾಯ್ದೆಗೆ (ಪಿಟಿಸಿಎಲ್) ಕಾಲಮಿತಿ ಅನ್ವಯಿಸುವುದಿಲ್ಲ ಎಂದು ತಿದ್ದುಪಡಿ ಆದೇಶ ಮಾಡಬೇಕು ಎಂದು ಪ್ರಜಾ ವಿಮೋಚನಾ ಚಳವಳಿ ಸಂಘಟನೆ ಘಟಕದ ಅಧ್ಯಕ್ಷ ಆನೇಕಲ್ ಕೃಷ್ಣಪ್ಪ ಮನವಿ ಮಾಡಿದರು.
ಬೆಂಗಳೂರಿನಲ್ಲಿ ಇತ್ತೀಚೆಗೆ ಕಂದಾಯ ಸಚಿವ ಕೃಷ್ಣಭೈರೇಗೌಡ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದರು.
ಈ ಕಾಯ್ದೆ ಜಾರಿಯಾದರೆ ಪ.ಜಾತಿ, ಪಂಗಡಗಳಿಗೆ ಸೇರಿದ ಬಡ ಕುಟುಂಬಗಳ ಜಮೀನುಗಳು ಉಳಿಯುತ್ತವೆ. ಇಲ್ಲವಾದಲ್ಲಿ ಕುಟುಂಬಗಳು ಭೂ ಹೀನರಾಗುತ್ತಾರೆ. ಪಿಟಿಸಿಎಲ್ ಕಾಯ್ದೆಯನ್ನು ಜಾರಿಗೊಳಿಸಿದ್ದರಿಂದ ಬಡ ಕುಟುಂಬಗಳಿಗೆ ಉಪಯೋಗವಾಗಿತ್ತು. ಪಿಟಿಸಿಎಲ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಕಂದಾಯ ಪ್ರಾಧಿಕಾರಗಳು ನೀಡುವ ತೀರ್ಪುಗಳು ಗ್ರ್ಯಾಂಟ್‌ದಾರರಿಗೆ ಅನ್ಯಾಯವಾಗುತ್ತಿದೆ. ಹಾಗಾಗಿ ಕಂದಾಯ ಸಚಿವರು ಈ ಬಗ್ಗೆ ಕ್ರಮ ಕೈಗೊಳ್ಳುವ ಮೂಲಕ ಕಾಯ್ದೆಗೆ ಬಲ ನೀಡಬೇಕು ಎಂದರು.
ತಾಲೂಕಿನಲ್ಲಿ ಹಲವು ಕುಟುಂಬಗಳು ಸರ್ಕಾರಿ ಜಾಗದಲ್ಲಿ ಭೂ ಸಾಗುವಳಿ ಮಾಡುತ್ತಿದ್ದಾರೆ. ಕುಟುಂಬಗಳು ನಮೂನೆ 50,53 ಸಲ್ಲಿಸಿವೆ. ಅರ್ಹರಿಗೆ ಸಾಗುವಳಿ ಚೀಟಿ ನೀಡಲು ಕ್ರಮ ಕೈಗೊಳ್ಳಬೇಕು. ಕಂದಾಯ ಇಲಾಖೆಯಲ್ಲಿ ಸಾರ್ವಜನಿಕರ ಕೆಲಸ ಕಾರ್ಯಗಳು ಸುಗಮವಾಗಿ ನಡೆಯುವಂತೆ ಕ್ರಮ ಕೈಗೊಳ್ಳಲು ಮನವಿ ಮಾಡಲಾಗಿದೆ ಎಂದರು.