ಹಳಿಯಾಳ: ಕ್ಷೇತ್ರದಲ್ಲಿ ಅತಿಕ್ರಮಣ ಸಾಗುವಳಿ ಮಾಡಿದ ಜಮೀನುಗಳನ್ನು ಜಿಪಿಎಸ್ ಮಾಡಿಕೊಡಬೇಕು ಹಾಗೂ ಈಗಾಗಲೇ ಜಿಪಿಎಸ್ ಮಾಡಿದ ಅತಿಕ್ರಮಿತ ಜಮೀನುಗಳನ್ನು ಫಲಾನುಭವಿಗಳಿಗೆ ಮಂಜೂರು ಮಾಡಿಸಿ ಪಟ್ಟಾ ನೀಡುವಂತೆ ದಲಿತ ಸಂಘರ್ಷ ಸಮಿತಿ (ಕೆಂಪು ಸೇನೆ) ತಹಸೀಲ್ದಾರ್ ಜಿ.ಕೆ. ರತ್ನಾಕರ ಅವರಿಗೆ ಸೋಮವಾರ ಸಲ್ಲಿಸಿತು.
ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಅತಿಕ್ರಮ ಜಮೀನುಗಳನ್ನು 70 ವರ್ಷಗಳಿಂದ ತಾಲೂಕಿನ ರೈತರು ಸಾಗುವಳಿ ಮಾಡಿಕೊಂಡು ಜಮೀನುಗಳನ್ನು ಅಭಿವೃದ್ಧಿಪಡಿಸಿ ಭತ್ತ, ಜೋಳ, ಕಬ್ಬು, ಇತರೆ ಬೆಳೆ ಬೆಳೆಯುತ್ತ ಉಪಜೀವನ ಸಾಗಿಸುತ್ತಿದ್ದಾರೆ. ಹೀಗಾಗಿ, ಸಂಬಂಧಿಸಿದ ಜಮೀನುಗಳನ್ನು ಅಧಿಕೃತವಾಗಿ ಮಂಜೂರು ಮಾಡಿಸಿ ಕೊಡುವುದರಲ್ಲಿ ಸರ್ಕಾರಗಳು ವಿಳಂಬ ಧೋರಣೆ ಅನುಸರಿಸುತ್ತಿವೆ.
ಅಲ್ಲದೆ, ಕಾರಣಾಂತರಗಳಿಂದ ಬಾಕಿ ಉಳಿದ ಜಮೀನುಗಳನ್ನು ಕೂಡಲೇ ಜಿಪಿಎಸ್ ಮಾಡಬೇಕು. ಈಗಾಗಲೇ ಜಿಪಿಎಸ್ ಆಗಿರುವ ಜಮೀನುಗಳಿಗೆ ಹಕ್ಕುಪತ್ರ ಮಂಜೂರಿ ಮಾಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ವಿ.ಬಿ. ರಾಮಚಂದ್ರ, ಚಂದ್ರಕಾಂತ ಕಲಭಾವಿ, ನಾಗೇಂದ್ರ ಜಿವೋಜಿ, ಕೃಷ್ಣ ಮೂರ್ತಿರಾವ್, ಗಣೇಶ ಆಂಬೊಲಿ, ಶಕೀಲ ಚೌಕಿದಾರ, ರಾಜು ಕುರಬರ ಇತರರು ಇದ್ದರು.