ಉಪ್ಪಿನಬೆಟಗೇರಿ: ಗ್ರಾಮಕ್ಕೆ ನಿತ್ಯ ಪೂರೈಕೆಯಾಗುವ ಕುಡಿಯುವ ನೀರಿನ ಬಗ್ಗೆ ಸಮಸ್ಯೆಯಾಗಿರುವ ಕುರಿತು ಧಾರವಾಡದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗದ ಕಾರ್ಯಪಾಲಕ ಇಂಜಿನಿಯರ್ ಆರ್.ಎಂ. ಸೊಪ್ಪಿನಮಠ ಅವರಿಗೆ ಉಪ್ಪಿನಬೆಟಗೇರಿ ಗ್ರಾಮ ಪಂಚಾಯಿತಿ ವತಿಯಿಂದ ಮಂಗಳವಾರ ಮನವಿ ನೀಡಲಾಯಿತು.
ಗ್ರಾಮದಲ್ಲಿ ತಲೆದೋರಿರುವ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಗಮನ ಹರಿಸಿ ಸೂಕ್ತ ಪರಿಹಾರ ಕಂಡುಕೊಳ್ಳಬೇಕು ಎಂದು ಮನವಿ ಮಾಡಿಕೊಂಡರು. ಗ್ರಾಮಕ್ಕೆ ನಿತ್ಯ ಕುಡಿಯಲು ಮಲಪ್ರಭಾ ನದಿಯಿಂದ ನೀರು ಸರಬರಾಜಾಗುತ್ತಿದೆ. ಆದರೆ, ಕಳೆದ ಕೆಲ ತಿಂಗಳಿಂದ ನೀರಿನ ಪೂರೈಕೆಯಲ್ಲಿ ಸಾಕಷ್ಟು ವ್ಯತ್ಯಯವಾಗುತ್ತಿದೆ. ಈ ಮೊದಲು ಗ್ರಾಮದಲ್ಲಿನ ಪ್ರತಿ ವಾರ್ಡ್ಗಳಿಗೆ 6ರಿಂದ 8 ದಿನಗಳಲ್ಲಿ ನೀರು ಪೂರೈಸಲಾಗುತಿತ್ತು. ಆದರೆ, ಈಗ 15 ದಿನಗಳಿಗೊಮ್ಮೆ ನೀರು ಪೂರೈಸಲಾಗುತ್ತಿದೆ. ವಿದ್ಯುತ್ ವ್ಯತ್ಯಯ, ಪೈಪ್ಗಳ ಒಡೆಯುವಿಕೆ ಜತೆಗೆ ಇತ್ತೀಚೆಗೆ ನಡೆದ ಜೆಜೆಎಂ ಪೈಪಲೈನ್ ಕಾಮಗಾರಿಯಲ್ಲಿಯ ಲೋಪಗಳು ಮತ್ತು ನೀರು ಪೂರೈಸುವ ಗುತ್ತಿಗೆದಾರನ ಬೇಜವಾಬ್ದಾರಿ ವರ್ತನೆಯಿಂದ ಸಾಕಷ್ಟು ಸಮಸ್ಯೆಗಳು ಉಂಟಾಗಿವೆ. ಹೀಗಾಗಿ ಗ್ರಾಮಸ್ಥರು, ಗ್ರಾಪಂ ಸದಸ್ಯರು ಮತ್ತು ಅಧಿಕಾರಿಗಳ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ. ಆದ್ದರಿಂದ ಗ್ರಾಮಕ್ಕೆ ಆಗಿರುವ ಕುಡಿಯುವ ನೀರಿನ ಸಮಸ್ಯೆ ಆದಷ್ಟು ಬೇಗ ಸರಿಪಡಿಸಬೇಕು ಮತ್ತು ದಿನಬಳಕೆಗೆ ಉಪಯೋಗಿಸುವ ಬೋರ್ವೆಲ್ಗಳ ಅಂತರ್ಜಲಮಟ್ಟ ಕಡಿಮೆಯಾಗಿದ್ದು, ಹೊಸ ಕೊಳವೆ ಬಾವಿಗಳನ್ನು ಕೊರೆಸುವ ವ್ಯವಸ್ಥೆ ಮಾಡಬೇಕು ಎಂದು ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಇಂಜಿನಿಯರ್ ಆರ್.ಎಂ. ಸೊಪ್ಪಿನಮಠ ಸಮಸ್ಯೆಯ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು, ಗುತ್ತಿಗೆದಾರ ಹಾಗೂ ಸಿಬ್ಬಂದಿಗಳನ್ನು ವಿಚಾರಿಸಿ ಮೇಲಧಿಕಾರಿಗಳ ಗಮನಕ್ಕೆ ತಂದು ಸೂಕ್ತ ಪರಿಹಾರ ಮಾಡಿಕೊಡುವ ಭರವಸೆ ನೀಡಿದರು.
ನಂತರ ಜಿಪಂ ಉಪ ಕಾರ್ಯದರ್ಶಿಯನ್ನು ಭೇಟಿಯಾಗಿ ಉಪ್ಪಿನಬೆಟಗೇರಿಯಲ್ಲಿ ನರೇಗಾ ಯೋಜನೆಯಡಿ ಸಿವಿಲ್ ಕಾಮಗಾರಿಗಳನ್ನು ಕೈಗೊಳ್ಳಲು ಅನುಮತಿ ನೀಡಬೇಕು. ಗ್ರಾಮದ ಪ್ರಮುಖ ರಸ್ತೆಗಳಿಗೆ ಅಪಘಾತಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಫೈಬರ್ ಹಂಪ್ಸ್್ಸಳನ್ನು ನಿರ್ವಿುಸಬೇಕು ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗೆ ಮನವಿ ಮಾಡಲಾಯಿತು. ಗ್ರಾಪಂ ಅಧ್ಯಕ್ಷೆ ಸಾಯಿರಾಬಾನು ಲಾಲ್ಮೀಯಾ, ಪಿಡಿಒ ಬಿ.ಎ. ಬಾವಾಖಾನವರ, ಸದಸ್ಯರಾದ ಮಂಜುನಾಥ ಮಸೂತಿ, ಅಬ್ದುಲಸಾಬ್ ನದಾಫ್, ಶಬ್ಬೀರ್ ಅಹ್ಮದ್ ಮಕಾಂದಾರ, ಸೈಯದಸಾಬ್ ಮದ್ನಿ, ಅಬ್ದುಲ್ ಲಂಗೋಟಿ, ಜೈಬುನಬಿ ಜೋರಮ್ಮನವರ, ಇತರರಿದ್ದರು.