ಜಿಲ್ಲೆ

ಪೂರ್ವಭಾವಿ ಸಭೆ ಕರೆಯುವಂತೆ ಡಿಸಿಗೆ ಮನವಿ

ಪ್ರಸಿನ್ ಕೆ.ಆರ್

ಹಾಸನ: ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಬಸವ ಸಂಸ್ಕೃತಿ ರಥಯಾತ್ರೆಗೆ ಆಹ್ವಾನಿಸುವ ಸಲುವಾಗಿ ಮತ್ತು ಈ ಕಾರ್ಯಕ್ರಮದ ಪೂರ್ವಭಾವಿ ಸಭೆ ಕರೆಯುವಂತೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದಿಂದ ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಪುಷ್ಪಗಿರಿ ಸಂಸ್ಥಾನದ ಶ್ರೀ ಸೋಮಶೇಖರ ಸ್ವಾಮೀಜಿ ನೇತೃತ್ವದಲ್ಲಿ ಗುರುವಾರ ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿದರು.

ಸರ್ಕಾರ ಬಸವ ಸಂಸ್ಕೃತಿ ರಥಯಾತ್ರೆಯನ್ನು ಘೋಷಿಸಿ ಒಂದು ವರ್ಷ ಕಳೆದಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ರಥಯಾತ್ರೆ ಸಾಗುತ್ತಿದೆ. ಇದರ ಅಂಗವಾಗಿ ಸೆ.21 ರಂದು ಹಾಸನಕ್ಕೆ ರಥಯಾತ್ರೆ ಬರುವ ಹಿನ್ನೆಲೆಯಲ್ಲಿ ಅದ್ದೂರಿ ಸ್ವಾಗತಕ್ಕೆ ಜಿಲ್ಲಾ ಮಟ್ಟದಲ್ಲಿ ಸಿದ್ಧತೆಗಳು ಆರಂಭಗೊಳ್ಳಲು ಸೆ.18 ರಂದು ಬೆಳಗ್ಗೆ 11 ಗಂಟೆಗೆ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ನಡೆಯಲಿದೆ ಎಂದು ಡಿಸಿ ತಿಳಿಸಿದರು.

ಈ ಸಭೆಗೆ ಅಧಿಕಾರಿಗಳು, ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಹಾಜರಾಗಲಿದ್ದಾರೆ. ಕಾರ್ಯಕ್ರಮವನ್ನು ಯಶಸ್ವಿಗೊಳಿಸುವ ಕುರಿತು ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಹಾಸನ ತಾಲೂಕು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ ಕಟ್ಟಾಯ ಶಿವಕುಮಾರ್, ಅಲೂರು ತಾಲೂಕು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ ಚಿಕ್ಕಕಣಗಾಲ್ ಅಜೀತ್, ವೀರಶೈವ ಲಿಂಗಾಯತ ಮುಖಂಡ ಹೀರಣಯ್ಯ ಇತರರು ಇದ್ದರು.