ಜಿಲ್ಲೆ

ಕುಂಭಕರ್ಣನ ನಿದ್ರೆಯಲ್ಲಿ ಜಿಲ್ಲಾಡಳಿತ!

ಶಿವರಾಜ.ಎಂ

 ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ

ಸಂಚಾರ ನಿಯಮ ಉಲ್ಲಂಸುವ ವಾಹನ ಸವಾರರನ್ನು ಎಚ್ಚರಿಸಲು ಯಮನ ವೇಷಧಾರಿಗಳು ರಸ್ತೆಗಳಿಯುವುದು, ಹೆಲ್ಮೆಟ್ ಹಾಕದಿರುವರಿಗೆ ಗದೆಯಿಂದ ಪ್ರಹಾರ ನಡೆಸುವಂತೆ ಬೆದರಿಸುವುದು ಅಲ್ಲಲ್ಲಿ ಆಗಾಗ ಕಂಡುಬರುತ್ತಿರುತ್ತದೆ. ಈ ಮೂಲಕ ಸಂಚಾರ ನಿಯಮ ಪಾಲನೆ ಬಗ್ಗೆ ಗಮನ ಸೆಳೆಯಲು ಪೊಲೀಸರು ಇಂಥ ವಿನೂತನ ಪ್ರಯತ್ನ ಮಾಡುತ್ತಾರೆ. ಇದೇ ರೀತಿ ದೊಡ್ಡಬಳ್ಳಾಪುರದ ಹೋರಾಟಗಾರರು ಕುಂಭಕರ್ಣನ ವೇಷ ಧರಿಸಿ ಜಿಲ್ಲಾಡಳಿತವನ್ನು ನಿದ್ರೆಯಿಂದ ಎಚ್ಚರಿಸುವ ಪ್ರಯತ್ನ ಮಾಡಿರುವುದು ಜಿಲ್ಲೆಯಲ್ಲಿ ವಿಶೇಷವಾಗಿ ಗಮನ ಸೆಳೆದಿದೆ.

ಜಿಲ್ಲಾಧಿಕಾರಿಗೆ ಮನವಿ:

ದೇವನಹಳ್ಳಿ ತಾಲೂಕು ಜಿಲ್ಲಾಡಳಿತಭವನದಲ್ಲಿನ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಕುಂಭಕರ್ಣ ವೇಷಧಾರಿಯೊಬ್ಬರು ಜನರ ಹಲವು ವರ್ಷಗಳ ಬೇಡಿಕೆ ಈಡೇರಿಸಿ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಿ ಎಂದು ಮನವಿ ಮಾಡುವ ಮೂಲಕ ವಿನೂತನವಾಗಿ ಜಿಲ್ಲಾಡಳಿತವನ್ನು ಎಚ್ಚರಿಸುವ ಪ್ರಯತ್ನ ಮಾಡಿದ್ದು ಗಮನ ಸೆಳೆದಿದೆ. ಕಳೆದ ಎರಡು ವರ್ಷದಿಂದ ಸಮಸ್ಯೆಗಳ ಬಗೆಹರಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರೂ ಯಾವೊಂದು ಸಮಸ್ಯೆಗಳಿಗೂ ಸ್ಪಂದಿಸದ ಹಿನ್ನಲೆಯಲ್ಲಿ ಹೋರಾಟಗಾರರು ವಿನೂತನವಾಗಿ ಮನವಿ ಮಾಡುವ ಮೂಲಕ ಗಮನಸೆಳೆದರು.

ಡಿಸಿ ಗಮನ ಸೆಳೆವ ಪ್ರಯತ್ನ: ದೊಡ್ಡಬಳ್ಳಾಪುರ ತಾಲೂಕಿನ ಜನತೆ ಹಲವು ವರ್ಷಗಳಿಂದ ಹಲವು ವಿಷಯಗಳಿಗೆ ಸಂಬಂಧಿಸಿದಂತೆ ಸಮಸ್ಯೆಗಳನ್ನ ಅನುಭವಿಸುತ್ತಿದ್ದಾರೆ, ಈ ಸಮಸ್ಯೆಗಳನ್ನ ಬಗೆಹರಿಸುವಂತೆ ದೊಡ್ಡಬಳ್ಳಾಪುರ ಯುವ ಸಂಚಲನ ತಂಡ ಜಿಲ್ಲಾಧಿಕಾರಿ ಅವರಿಗೆ ಕಳೆದರಡು ವರ್ಷದಿಂದ ಮನವಿ ಮಾಡುತ್ತಲೇ ಬಂದಿದೆ, ಆದರೆ ಇಲ್ಲಿಯವರೆಗೂ ಯಾವ ಸಮಸ್ಯೆಗೂ ಪರಿಹಾರ ಸಿಕ್ಕಿಲ್ಲ, ಹೊಸ ವರ್ಷದಿಂದಾದರೂ ಸಮಸ್ಯೆಗಳನ್ನ ಬಗೆಹರಿಸುವಂತೆ ಜಿಲ್ಲಾಧಿಕಾರಿಗಳ ಗಮನ ಸೆಳೆಯುವ ಪ್ರಯತ್ನ ಇದಾಗಿದೆ.ಸಾರ್ವಜನಿಕರ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಜಿಲ್ಲಾಡಳಿತ ಮೀನಮೇಷ ಎಣಿಸುತ್ತಿದೆ ಸಣ್ಣ ಕೆಲಸಕ್ಕೂ ತಿಂಗಳುಗಟ್ಟಲೆ ಅಲೆದಾಡುವಂತಾಗಿದೆ. ಅಧಿಕಾರಿಗಳು ಗಾಡನಿದ್ರೆಯಲ್ಲಿದ್ದಾರೆ, ಜಿಲ್ಲಾಡಳಿತ ಹೊಸವರ್ಷದಿಂದಾದರೂ ಕುಂಭಕರ್ಣನ ನಿದ್ರೆಯಿಂದ ಎಚ್ಚೆತ್ತು ಆಡಳಿತ ಯಂತ್ರಕ್ಕೆ ಚುರುಕು ನೀಡುವಂತಾಗಲಿ ಎಂಬುದು ನಮ್ಮ ಆಶಯವಾಗಿದೆ ಎಂದು ಸಂಘಟನೆ ಸದಸ್ಯರು ತಿಳಿಸಿದರು.

ವಿವಿಧ ಬೇಡಿಕೆಗಳ ಮನವಿ ಪತ್ರ: ತಾಲೂಕು ವಾಯು ಮಾಲಿನ್ಯ ನಿಯಂತ್ರಣ ಮಂಡಳಿ ದೊಡ್ಡಬಳ್ಳಾಪುರ ತಾಲೂಕಿಗೆ ಸ್ಥಳಾಂತರಿಸಬೇಕು, ಶಾಲಾ ಆವರಣದ ಅನತಿ ದೂರದಲ್ಲಿ ಹಾಗೂ ನಿಯಮ ಬಾಹಿರವಾಗಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವುದನ್ನು ತಡೆಯಬೇಕು, ತ್ಯಾಜ್ಯ ನಿರ್ವಹಣೆಯನ್ನು ಸಮರ್ಪವಾಗಿ ನಿರ್ವಹಿಸಬೇಕು, ನ್ಯಾಯಬೆಲೆ ಅಂಗಡಗಳನ್ನು ತಿಂಗಳ ಪೂರ್ತಿ ದಿನ ತೆರೆಯಬೇಕು ಸೇರಿ ಇನ್ನಿತರ ಪ್ರಮುಖ ಬೇಡಿಕೆಗಳ ಮನವಿ ಪತ್ರ ಸಲ್ಲಿಸಲಾಯಿತು.

 ಉಸ್ತುವಾರಿ ಸಚಿವರ ಬಳಿಯೇ ಮನವಿ: ಜಿಲ್ಲಾಧಿಕಾರಿ ಕಚೇರಿ ಎದುರು ಕಾದು ಕುಳಿತಿದ್ದ ಕುಂಭಕರ್ಣ ವೇಷಧಾರಿ ಹಾಗೂ ಸಂಘಟನೆ ಸದಸ್ಯರನ್ನು ಕಂಡ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಒಂದು ಕ್ಷಣ ಅವಕ್ಕಾದರು. ಸಂಘಟನೆಯವರೊಂದಿಗೆ ಮಾತನಾಡಿ ಸಮಸ್ಯೆಗಳನ್ನು ಆಲಿಸಿದರು. ಈ ಬಗ್ಗೆ ಕ್ರಮಕೈಗೊಳ್ಳುವಂತೆ ಸ್ಥಳದಲ್ಲಿದ್ದ ಜಿಲ್ಲಾಧಿಕಾರಿ ಡಾ.ಎನ್.ಶಿವಶಂಕರ್ ಅವರಿಗೆ ಸೂಚನೆ ನೀಡಿದರು.

ತಿಂಗಳ ಪೂರ್ತಿದಿನ ಪಡಿತರ ಅಂಗಡಿಗಳನ್ನು ತೆರೆಯುವಂತೆ ಸರ್ಕಾರಿ ಆದೇಶವಿದ್ದರೂ ತಿಂಗಳಲ್ಲಿ ಕೇವಲ 3 ರಿಂದ 4 ದಿನ ಮಾತ್ರ ಪಡಿತರ ವಿತರಣೆಯಾಗುತ್ತಿದೆ, ದೊಡ್ಡಬಳ್ಳಾಪುರ ನಗರದ ಕಸದ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ, ಜೀವ ವೈವಿಧ್ಯ ನಿರ್ವಹಣಾ ಸಮಿತಿ ರಚನೆಯಾಗಿಲ್ಲ, ಶಾಲೆಗಳ ಬಳಿ ತಂಬಾಕು ಮಾರಾಟ ಅವ್ಯಾಹತವಾಗಿದೆ, ಅರ್ಕಾವತಿ ನದಿ ಪಾತ್ರದ ಕೆರೆಗಳ ಸಂರಕ್ಷಣೆಗೆ ಗಮನ ನೀಡುತ್ತಿಲ್ಲ. ಈ ಬಗ್ಗೆ ಹಲವು ವರ್ಷದಿಂದ ಹೋರಾಟ ಮಾಡುತ್ತಿದ್ದರೂ ಯಾವುದೇ ಪರಿಹಾರ ಸಿಕ್ಕಿಲ್ಲವಾದ್ದರಿಂದ ಜಿಲ್ಲಾಡಳಿತವನ್ನು ಎಚ್ಚರಿಸುವ ವಿನೂತನ ಪ್ರಯತ್ನ ಮಾಡಿದ್ದೇವೆ.

ಚಿದಾನಂದ್, ಯುವ ಸಂಚಲನ ಸಂಘಟನೆ ಅಧ್ಯಕ್ಷ