ಜಿಲ್ಲೆ

ವರ್ಗಾವಣೆ ಪಟ್ಟಿಯಿಂದ ಕೈಬಿಡಲು ಮನವಿ

ಉತ್ತರ ಕನ್ನಡ ಡೆಸ್ಕ್

ಮುಂಡಗೋಡ: ಹೆಚ್ಚುವರಿ ಶಿಕ್ಷಕರ ವರ್ಗಾವಣೆ ಪಟ್ಟಿಯಿಂದ ತಾಲೂಕಿನ ಸನವಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಇಬ್ಬರು ಶಿಕ್ಷಕರನ್ನು ಕೈಬಿಡುವಂತೆ ಆಗ್ರಹಿಸಿ ಎಸ್​ಡಿಎಂಸಿ ಸದಸ್ಯರು ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಸುಮಾ ಅವರಿಗೆ ಬುಧವಾರ ಮನವಿ ಸಲ್ಲಿಸಿದರು.

ಶಾಲೆಯಲ್ಲಿ 1ರಿಂದ 7ನೇ ತರಗತಿಯವರೆಗೆ ಒಟ್ಟು 75 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಕಳೆದ ಒಂದು ವರ್ಷದ ಹಿಂದೆ ಶಾಲೆಯ ಮುಖ್ಯ ಶಿಕ್ಷಕರಾಗಿದ್ದ ಎಸ್.ಬಿ. ಕೆಂಗಾರ್ ಅವರನ್ನು ಬೇರೆ ಶಾಲೆಗೆ ನಿಯೋಜನೆ ಮಾಡಲಾಗಿದೆ. ಸದ್ಯ ಶಾಲೆಯಲ್ಲಿ 5 ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದು, ಅವರಲ್ಲಿಯೇ ಒಬ್ಬರು ಪ್ರಭಾರ ಮುಖ್ಯ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಮಕ್ಕಳ ಕಲಿಕೆ ಮತ್ತು ಕಚೇರಿಯ ಕೆಲಸದಲ್ಲಾಗಲಿ ಯಾವುದೇ ರೀತಿಯ ಸಮಸ್ಯೆಗಳು ಬಂದಿಲ್ಲ. ಆದರೆ ಆ. 13ರಂದು ಶಿಕ್ಷಕರ ಹೆಚ್ಚುವರಿ ವರ್ಗಾವಣೆ ಪಟ್ಟಿಯಲ್ಲಿ ಶಿಕ್ಷಕರಾದ ಮಂಜುನಾಥ ಕಾನನವರ ಹಾಗೂ ಸುವರ್ಣ ಬಿರಾದಾರ ಹೆಸರುಗಳನ್ನು ಕಾಣಿಸಿ ಬೇರೆ ಶಾಲೆಗೆ ವರ್ಗಾಯಿಸಿದ್ದಾರೆ. ಇದರಿಂದ 1ರಿಂದ 7ನೇ ತರಗತಿಯವರೆಗೆ ಮೂವರು ಶಿಕ್ಷಕರಿಂದ ಬೋಧನೆ ಹಾಗೂ ಕಚೇರಿ ಕೆಲಸಗಳಲ್ಲಿ ತೊಡಗಿಸಿಕೊಳ್ಳುವುದು ಕಷ್ಟವಾಗುತ್ತದೆ. ಆದ್ದರಿಂದ ಹೆಚ್ಚುವರಿ ಶಿಕ್ಷಕರ ವರ್ಗಾವಣೆ ಪಟ್ಟಿಯಿಂದ ಶಾಲೆಯ ಇಬ್ಬರು ಶಿಕ್ಷಕರನ್ನು ಕೈಬಿಡುವಂತೆ ಅವರು ಮನವಿಯಲ್ಲಿ ತಿಳಿಸಿದ್ದಾರೆ.

ಎಸ್​ಡಿಎಂಸಿ ಅಧ್ಯಕ್ಷ ನಾಗರಾಜ ಗುಬ್ಬಕ್ಕನವರ, ಉಪಾಧ್ಯಕ್ಷೆ ಮಧು ಕೆರಿಹೊಲದವರ, ಸದಸ್ಯರಾದ ಪ್ರಕಾಶ ಕ್ಯಾಮಣಕೇರಿ, ದಿನೇಶ ಎಸ್.ಕೆ, ಪಂಚಯ್ಯ ಹಿರೇಮಠ ಹಾಗೂ ಗ್ರಾಮಸ್ಥರು ಇದ್ದರು.