ಹುಬ್ಬಳ್ಳಿ : ಹುಬ್ಬಳ್ಳಿ-ಜೋಧಪುರ ವಿಶೇಷ ರೈಲಿನ ಸಂಚಾರ ಹೆಚ್ಚಿಸಲು ಹಾಗೂ ಇನ್ನಿತರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ವಲಯ ರೈಲ್ವೆ ಬಳಕೆದಾರರ ಸಲಹಾ ಸಮಿತಿ ಸದಸ್ಯ ಮಹೇಂದ್ರ ಸಿಂಘಿ ನೇತೃತ್ವದ ನಿಯೋಗ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಅವರಿಗೆ ನಗರದಲ್ಲಿ ಸೋಮವಾರ ಮನವಿ ಸಲ್ಲಿಸಿದರು.
ಈ ರೈಲು ಸಂಚಾರ ಪ್ರಾರಂಭಿಸಿದ್ದರಿಂದ ಕರ್ನಾಟಕ ಹಾಗೂ ರಾಜ್ಯಸ್ತಾನ ರಾಜ್ಯಗಳ ಮಧ್ಯೆ ಪ್ರವಾಸೋದ್ಯಮ, ವ್ಯಾಪಾರ ಹೆಚ್ಚಳದ ಜತೆಗೆ ಕುಟುಂಬ ಸಂಬಂಧಗಳು ಸಹ ಬಲಗೊಂಡಿವೆ. ಈ ರೈಲು ವಾರಕ್ಕೆ ಎರಡು ಬಾರಿ ಸಂಚರಿಸುವಂತೆ ಆಗ್ರಹಿಸಿದರು.
ಅಂಗವಿಕಲ ಪ್ರಯಾಣಿಕರಿಗೆ ಆನ್ಲೈನ್ ಸೌಲಭ್ಯ ಹೊಂದಿದ ಟಿಕೆಟ್ ಬುಕ್ಕಿಂಗ್ ಸವಲತ್ತು ಒದಗಿಸಬೇಕು. ಹುಬ್ಬಳ್ಳಿ-ದಾದರ ಎಕ್ಸ್ಪ್ರೆಸ್ ರೈಲಿನ ನವೀಕರಣ ಮತ್ತು ಎಲ್ಎಚ್ಬಿ ಬೋಗಿಗಳಾಗಿ ಪರಿವರ್ತನೆ ಮಾಡುವಂತೆ ಕೋರಿದರು. ಈ ರೈಲು ಉತ್ತರ ಕರ್ನಾಟಕ-ಮುಂಬೈ ಸಂಪರ್ಕದ ಜೀವ ನಾಡಿ ಆಗಿದ್ದು, ಐಸಿಎಫ್ ಹಳೇ ಬೋಗಿಗಳೊಂದಿಗೆ ಸಂಚರಿಸುತ್ತಿದೆ. ಈ ಬೋಗಿಗಳಲ್ಲಿ ಸುರಕ್ಷತೆಯ ಕೊರತೆಯಿದ್ದು , ಆರಾಮ ಹಾಗೂ ಸುಧೀರ್ಘ ಅವಧಿಯ ದೃಷ್ಟಿಯಿಂದ ಎಲ್ಎಚ್ಬಿ ಬೋಗಿಗಳನ್ನಾಗಿ ಪರಿವರ್ತಿಸಬೇಕು ಎಂದು ಆಗ್ರಹಿಸಿದರು.
ಸದ್ಯ ದಾದರವರೆಗೆ ಸಂಚರಿಸುವ ಈ ರೈಲಿನ ಸಂಚಾರವನ್ನು ಮುಂಬೈನ ಸಿಎಸ್ಎಂಟಿ ನಿಲ್ದಾಣದವರೆಗೆ ವಿಸ್ತರಿಸಬೇಕು ಎಂದು ಕೋರಿದರು.
ಹುಬ್ಬಳ್ಳಿ- ಅಂಕೋಲಾ ಹೊಸ ರೈಲು ಮಾರ್ಗವನ್ನು ತ್ವರಿತಗೋಳಿಸಲು ಇದೇ ಸಂದರ್ಭದಲ್ಲಿ ಒತ್ತಾಯಿಸಿದರು.
ಗದಗ-ಲಕ್ಷೆ್ಮೕಶ್ವರ -ಯಳವಗಿ-ಹಾವೇರಿ ಹೊಸ ರೈಲು ಮಾರ್ಗಕ್ಕೆ ಅನುಮೋದನೆ ನೀಡಬೇಕು. ಹುಬ್ಬಳ್ಳಿ -ಮಂತ್ರಾಲಯ ರೈಲು ಸೌಲಭ್ಯ ಪ್ರಾರಂಭಿಸಬೇಕು. ಹುಬ್ಬಳ್ಳಿ-ಚೆನೈ ಸೆಂಟ್ರಲ್ ಎಕ್ಸ್ಪ್ರೆಸ್ ರೈಲು ನಿತ್ಯ ಸಂಚರಿಸುವಂತಾಗಬೇಕು. ಹುಬ್ಬಳ್ಳಿ-ಹೈದ್ರಾಬಾದ್ ನೇರ ರೈಲು ಸೇವೆ ಪ್ರಾರಂಭಿಸಬೇಕು. ಹುಬ್ಬಳ್ಳಿ -ಮುಂಬೈ ಹಾಗೂ ಬೆಳಗಾವಿ-ಬೆಂಗಳೂರು ಮಧ್ಯೆ ವಂದೇ ಭಾರತ್ ಸ್ಲೀಪರ್ ರೈಲು ಸಂಚಾರ ಪ್ರಾರಂಭಿಸಬೇಕು. ಬಿಕಾನೇರ- ಮಿರಜ ಎಕ್ಸ್ಪ್ರೆಸ್ ರೈಲನ್ನು ಹುಬ್ಬಳ್ಳಿಯವರೆಗೆ ವಿಸ್ತರಿಸಬೇಕು. ಹುಬ್ಬಳ್ಳಿ-ಶಿರಡಿ (ಕೋಪರಗಾಂವ್)-ಮನ್ಮಾಡ ನೇರ ದೈನಂದಿನ ರೈಲು ಸಂಚಾರ ಪ್ರಾರಂಭಿಸಬೇಕು. ಪ್ರಮುಖ ರೈಲು ನಿಲ್ದಾಣಗಳಲ್ಲಿ ಶುದ್ಧ ಸಸ್ಯಾಹಾರಿ ಜೈನ ಆಹಾರ ಕ್ಯಾಂಟೀನ್ ಸ್ಥಾಪಿಸಬೇಕು ಹಾಗೂ ಇನ್ನಿತರ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಸಲ್ಲಿಸಿದರು.
ವಲಯ ರೇಲ್ವೆ ಬಳಕೆದಾರರ ಸಲಹಾ ಸಮಿತಿ ಮಾಜಿ ಸದಸ್ಯ ಗೌತಮ ಗುಲೇಚ್ಚ, ಉದ್ಯಮಿ ಡಾ. ವಿ.ಎಸ್.ವಿ. ಪ್ರಸಾದ,ಸುಭಾಷ ಡಂಕ ಹಾಗೂ ಇತರರು ಈ ಸಂದರ್ಭದಲ್ಲಿ ಹಾಜರಿದ್ದರು.