ಮಂಡ್ಯ: ರೈತರಿಗೆ ಅನುಕೂಲವಾಗಲೆಂದು ಕಳೆದ ಬಿಜೆಪಿ ಸರ್ಕಾರ ಜಾರಿಗೊಳಿಸಿದ್ದ ಯೋಜನೆಗಳನ್ನು ಮುಂದುವರೆಸಿಕೊಂಡು ಹೋಗಬೇಕೆಂದು ರಾಜ್ಯಸರ್ಕಾರವನ್ನು ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಜೋಗಿಗೌಡ ಒತ್ತಾಯಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಒಂದು ತಿಂಗಳಾಗಿದೆ. ಅಂತೆಯೇ ಮೊದಲ ಬಜೆಟ್‌ನಲ್ಲಿ ಮಂಡಿಸಿರುವ ವಿಷಯವನ್ನು ಗಮನಿಸಿದರೆ ಬಿಜೆಪಿ ಅನುಷ್ಠಾನಗೊಳಿಸಿದ ಹಲವು ಯೋಜನೆಗಳನ್ನು ವಾಪಸ್ ತೆಗೆದುಕೊಂಡಿರುವಂತೆ ಕಂಡುಬರುತ್ತಿದೆ. ಇಂತಹ ನಿರ್ಧಾರ ಸರಿಯಲ್ಲ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.
ಪ್ರಮುಖವಾಗಿ ರೈತರ ವಿದ್ಯಾನಿಧಿ ಯೋಜನೆ, ಎಪಿಎಂಸಿ ಕಾನೂನು, ಜಿಲ್ಲೆಗೊಂದು ಗೋಶಾಲೆ ಯೋಜನೆ, ಭೂಸಿರಿ ಯೋಜನೆ, ಕಿಸಾನ್ ಸಮ್ಮಾನ್ ನಿಧಿ ಯೋಜನೆ, ರೈತ ಶಕ್ತಿ ಯೋಜನೆಗಳನ್ನು ರದ್ದು ಮಾಡುವುದರ ಜತೆಗೆ ವಿದ್ಯುತ್ ದರ ಏರಿಕೆ ಮಾಡಲಾಗಿದೆ. ಇದರಿಂದ ಅನಾನುಕೂಲವಾಗಿದೆ. ಇದಲ್ಲದೆ ನೀರಾವರಿ ಯೋಜನೆಗಳನ್ನು ನಿರ್ಲಕ್ಷೃ ಮಾಡಲಾಗಿದೆ. ಆದ್ದರಿಂದ ಇದರ ಬಗ್ಗೆ ಗಮನಹರಿಸಬೇಕು ಎಂದು ಆಗ್ರಹಿಸಿದರು.
ಇನ್ನು ಜಿಲ್ಲೆಗೆ ಸಂಬಂಧಿಸಿದಂತೆ ಮೈಷುಗರ್ ಕಾರ್ಖಾನೆ ಪುನಶ್ಚೇತನದ ಜತೆಗೆ ಎಥೆನಾಲ್ ಘಟಕವನ್ನು ತುರ್ತಾಗಿ ಪ್ರಾರಂಭಿಸಬೇಕು. ಅಂತೆಯೇ ಮದ್ದೂರು ಹಾಗೂ ಮಳವಳ್ಳಿ ತಾಲೂಕಿನಲ್ಲಿ ಹೆಚ್ಚಿನ ರೇಷ್ಮೆ ಬೆಳೆಗಾರರು ಇದ್ದಾರೆ. ಜತೆಗೆ ರೇಷ್ಮೆ ಬೆಳೆಯುವುದರಲ್ಲಿ ಮಂಡ್ಯ ಜಿಲ್ಲೆ ರಾಜ್ಯದಲ್ಲಿಯೇ ಮೊದಲ ಸ್ಥಾನದಲ್ಲಿದೆ. ಆದ್ದರಿಂದ ಜಿಲ್ಲೆಯಲ್ಲಿ ರೇಷ್ಮೆ ನೂಲು ನೇಯ್ಗೆ ಘಟಕ ಪ್ರಾರಂಭಿಸಬೇಕು. ನಾಗಮಂಗಲ ಹಾಗೂ ಕೆ.ಆರ್.ಪೇಟೆಯಲ್ಲಿ ತೆಂಗು, ಅಡಿಕೆ ಬೆಳೆ ಜಾಸ್ತಿ ಇರುವುದರಿಂದ ರೈತರಿಗೆ ಅನುಕೂಲವಾಗುವ ಕಾರ್ಯಕ್ರಮ ರೂಪಿಸಬೇಕೆಂದು ಒತ್ತಾಯಿಸಿದರು.
ಮೋರ್ಚಾದ ಪ್ರಧಾನ ಕಾರ್ಯದರ್ಶಿ ಜವರೇಗೌಡ, ಕಾರ್ಯದರ್ಶಿಗಳಾದ ಎಚ್.ಎಂ.ಕೃಷ್ಣ, ನಾಗರಾಜು ಹನಿಯಂಬಾಡಿ ಇದ್ದರು.