ಕಳಸ: ಕುದುರೆಮುಖ ರಾಷ್ಟ್ರೀಯ ಉದ್ಯಾನದ ಮೂಲಕ ಹಾದುಹೋಗಿರುವ ಕಳಸ-ಕುದುರೆಮುಖ-ಎಸ್.ಕೆ.ಬಾರ್ಡರ್ ರಾಜ್ಯಹೆದ್ದಾರಿ ದುರಸ್ತಿಗೆ ಅರಣ್ಯ ಇಲಾಖೆ ತಕರಾರು ಮಾಡಬಾರದು ಎಂದು ಕಾಂಗ್ರೆಸ್ ಮುಖಂಡರು ಹಾಗೂ ಗ್ರಾಮಸ್ಥರು ಅರಣ್ಯ ಇಲಾಖೆಯನ್ನು ಒತ್ತಾಯಿಸಿದರು.
ರಾಜ್ಯಹೆದ್ದಾರಿ ನಿರ್ವಹಣೆಗೆ ಅರಣ್ಯ ಇಲಾಖೆ ತಕರಾರು ಮಾಡಲಿದೆ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಇದೆ. ಈ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಅರಣ್ಯಾಧಿಕಾರಿಗೆ ಮನವಿ ಮಾಡಿದರು.
ವಲಯ ಅರಣ್ಯಾಧಿಕಾರಿ ಚೇತನ್ ಮಾತನಾಡಿ, ಈಗಾಗಲೇ ಇರುವ ಹೆದ್ದಾರಿ, ಚರಂಡಿ ನಿರ್ವಹಣೆಗೆ ತಕರಾರು ಮಾಡಿಲ್ಲ. ರಸ್ತೆ ಪಕ್ಕದ ಮರಗಳನ್ನು ಜೆಸಿಬಿ ಬಳಸಿ ತೆರವು ಮಾಡಿದ್ದಕ್ಕೆ ಆಕ್ಷೇಪ ಮಾಡಲಾಗಿದೆ. ರಸ್ತೆ ಕಡೆ ಬಾಗಿರುವ ಮರದ ರೆಂಬೆಗಳನ್ನು ಮನುಷ್ಯರೇ ಕಟಾವು ಮಾಡಬೇಕು. ತಿರುವುಗಳಲ್ಲಿ ರಸ್ತೆ ಕಾಣುವಂತೆ ಮಾಡಲು ಆಕ್ಷೇಪವಿಲ್ಲ ಎಂದರು.
ಕಾಂಗ್ರೆಸ್ ಮುಖಂಡ ಶ್ರೇಣಕ್ ಮಾತನಾಡಿ, ಕೆಂಗನಕೊಂಡದಿಂದ ನೆಲ್ಲಿಬೀಡುವರೆಗಿನ 5 ಕೋಟಿ ರೂ. ವೆಚ್ಚದಲ್ಲಿ 2 ಕಿ.ಮೀ. ರಸ್ತೆ ಕಾರ್ಯ ಆರಂಭವಾಗಲಿದೆ. ನೆಲ್ಲಿಬೀಡಿನಿಂದ ಕುದುರೆಮುಖದವರೆಗೆ ಕಳೆದ ವಷರ್ ಉಳಿದ ಕಾಮಗಾರಿ ಸದ್ಯದಲ್ಲಿಯೇ ಆರಂಭವಾಗಲಿದೆ ಎಂದರು.
ಕಾಂಗ್ರೆಸ್ ಮುಖಂಡ ವೀರೇಂದ್ರ ಮಾತನಾಡಿ, ಕುದುರೆಮುಖದಿಂದ ಕಡಂಬಿ ಜಲಪಾತದವರೆಗಿನ 8 ಕಿಮೀ ರಸ್ತೆ ಮರುಡಾಂಬರೀಕರಣಕ್ಕೆ 6 ಕೋಟಿ ರೂ.ವೆಚ್ಚದ ಯೋಜನೆ ಸಿದ್ಧವಾಗಿದೆ. ಅಲ್ಲಿಂದ ಎಸ್.ಕೆ.ಬಾರ್ಡರ್‌ವರೆಗಿನ 12ಕಿಮೀ ರಸ್ತೆ ನಿರ್ವಹಣೆ ಮಾಡಲಾಗುತ್ತದೆ. ಮುಂದಿನ ಹಂತದಲ್ಲಿ ಇಲ್ಲೂ ಡಾಂಬರೀಕರಣ ನಡೆಯಲಿದೆ. ಈ ಎಲ್ಲ ಕಾಮಗಾರಿಗಳಿಗೆ ಅರಣ್ಯ ಇಲಾಖೆ ಸಹಕಾರ ಅಗತ್ಯ ಎಂದರು.