ಚಿಕ್ಕಮಗಳೂರು: ಹೊಸದಾಗಿ ಆಟೋ ಮತ್ತು ದ್ವಿಚಕ್ರ ವಾಹನದ ಬಾಡಿಗೆ ಪರವಾನಗಿ ನೀಡುವುದನ್ನು ಸ್ಥಗಿತಗೊಳಿಸಬೇಕು ಹಾಗೂ ಚಾಲಕರಿಗೆ ನಿವೇಶನ ಒದಗಿಸಿಕೊಡಬೇಕು ಎಂದು ನಗರ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ಮುಖಂಡರುಗಳು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಉದಯಕುಮಾರ್, ಈಗಾಗಲೇ ನಗರದಲ್ಲಿ ೪ ಸಾವಿರಕ್ಕೂ ಆಟೋಗಳಿದ್ದು ಬಾಡಿಗೆ ಇಲ್ಲದೇ ಚಾಲಕರು ಮತ್ತು ಮಾಲೀಕರು ಪರದಾಡುವ ಸ್ಥಿತಿ ಎದುರಾಗಿದೆ. ಹೀಗಾಗಿ ಹೊಸದಾಗಿ ಆಟೋ ಪರವಾನಗಿ ನೀಡುವುದನ್ನು ಸ್ಥಗಿತಗೊಳಿಸಬೇಕು ಎಂದು ಒತ್ತಾಯಿಸಿದರು.
ಈ ನಡುವೆ ನಗರದಲ್ಲಿ ಅನಧಿಕೃತವಾಗಿ ಬಾಡಿಗೆ ದ್ವಿಚಕ್ರ ವಾಹನ ಸಂಚರಿಸುತ್ತಿವೆ. ಯಾವ ಮಾನದಂಡದವಿಲ್ಲದೇ, ಹಳದಿ ಬೋರ್ಡ್ ವಾಹನಗಳು ಸಂಚರಿಸುತ್ತಿರುವುದು ಅನುವiನಕ್ಕೆ ಎಡೆ ಮಾಡಿಕೊಟ್ಟಿದೆ. ಅಲ್ಲದೇ ವೈಟ್ ಬೋರ್ಡ್ ವಾಹನಗಳನ್ನು ಬಾಡಿಗೆಗೆ ಬಳಸುತ್ತಿರುವ ಪರಿಣಾಮ ಆಟೋ ಚಾಲಕರು, ಮಾಲೀಕರಿಗೆ ತುಂಬಲಾರದ ನಷ್ಟ ಉಂಟಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಂಘದ ಕಾರ್ಯದರ್ಶಿ ಜಗದೀಶ್ ಕೋಟೆ ಮಾತನಾಡಿ, ನಗರದಲ್ಲಿ ಬಡ ಆಟೋ ಚಾಲಕರಿಗೆ ನಿವೇಶನದ ಕೊರತೆ ಬಹಳಷ್ಟಿದೆ. ಹೀಗಾಗಿ ವಸತಿ ಬಡಾವಣೆಯನ್ನು ನಿರ್ಮಿಸಿ ನಿವೇಶನ ಹಂಚಿಕೆ ಮಾಡುವುದರ ಜೊತೆಗೆ ಕಾಲನಿ ನಿರ್ಮಾಣ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ಸರ್ಕಾರದ ನಿಗಮ ಮಂಡಳಿಗಳ ಮುಖಾಂತರ ನೇರ ಸಾಲಸೌಲಭ್ಯ ಮತ್ತು ಸಬ್ಸಿಡಿ ಸವಲತ್ತುಗ ಳನ್ನು ಆಟೋ ಚಾಲಕರು ಮತ್ತು ಮಾಲೀಕರುಗಳಿಗೆ ದೊರೆಯುತ್ತಿಲ್ಲ. ಈ ಬಗ್ಗೆ ಸಚಿವರು ಗಮನಹರಿಸಿ ಸಹಾಯಹಸ್ತ ಚಾಚಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ನಗರ ಸಂಘದ ಅಧ್ಯಕ್ಷ ರಾಮೇಗೌಡ, ಪ್ರಧಾನ ಕಾರ್ಯದರ್ಶಿ ಎಚ್.ಸಿ.ರಾಘವೇಂದ್ರ, ಸದಸ್ಯರಾದ ಯಶವಂತ್, ಜಮೀವುಲ್ಲಾ, ಭದ್ರುದ್ದಿನ್, ನಿಸಾರ್ ಅಹ್ಮದ್ ಮತ್ತಿತರರಿದ್ದರು.