ಪಾಂಡವಪುರ: ಕೆರೆ ಜಮೀನು ಅತಿಕ್ರಮಣ ತೆರವುಗೊಳಿಸದಿದ್ದರೆ ಲೋಕಸಭೆ ಚುನಾವಣೆ ಬಹಿಷ್ಕರಿಸುವುದಾಗಿ ಪಟ್ಟು ಹಿಡಿದಿದ್ದ ಹೊಸಕೋಟೆ ಗ್ರಾಮಸ್ಥರನ್ನು ತಹಸೀಲ್ದಾರ್ ಜಿ.ಎಸ್.ಶ್ರೇಯಸ್ ಸಮಾಧಾನಪಡಿಸಿ ಚುನಾವಣೆ ಬಳಿಕ ಸಮಸ್ಯೆ ಇತ್ಯರ್ಥಪಡಿಸುವ ಭರವಸೆ ನೀಡಿದರು.
ಗ್ರಾಮದ ಹೊರವಲಯದ 18 ಮತ್ತು 19ನೇ ಸರ್ವೇ ನಂಬರ್‌ನಲ್ಲಿರುವ ನುರಾರು ಎಕರೆ ಕೆರೆಯನ್ನು ಅತಿಕ್ರಮಣ ಉದ್ದೇಶದಿಂದ ಪ್ರಭಾವಿ ವ್ಯಕ್ತಿಯೊಬ್ಬರು ಕೆರೆ ಏರಿಯನ್ನು ಒಡೆದು ಸಮತಟ್ಟುಗೊಳಿಸಿರುವ ಹಿನ್ನೆಲೆಯಲ್ಲಿ ಇಡೀ ಗ್ರಾಮಸ್ಥರು ಒಗ್ಗಟ್ಟಾಗಿ ಕೆರೆ ಜಮೀನನ್ನು ಅತಿಕ್ರಮಿಸಿರುವ ವ್ಯಕ್ತಿಯ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ಕಳೆದೆರಡು ದಿನಗಳ ಹಿಂದೆ ಪ್ರತಿಭಟನೆ ನಡೆಸಿ ಲೋಕಸಭಾ ಚುನಾವಣಾ ಬಹಿಷ್ಕರಿಸುವುದಾಗಿ ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತಕ್ಕೆ ಎಚ್ಚರಿಸಿದ್ದರು. ಈ ಹಿನ್ನೆಲೆಯಲ್ಲಿ ಭಾನುವಾರ ಗ್ರಾಮಕ್ಕೆ ಭೇಟಿ ನೀಡಿದ ತಹಸೀಲ್ದಾರ್ ಜಿ.ಎಸ್.ಶ್ರೇಯಸ್ ಚುನಾವಣೆ ಬಹಿಷ್ಕರಿಸದಂತೆ ಮನವಿ ಮಾಡಿದರು.
ಈ ವೇಳೆ ಗ್ರಾಮಸ್ಥರು ಮಾತನಾಡಿ, ಬಹಳ ಹಿಂದಿನಿಂದಲೂ ಗ್ರಾಮದ ಎಲ್ಲರು ಜಾತಿ, ಬೇಧವಿಲ್ಲದೆ ಒಗ್ಗಟ್ಟಾಗಿ ಬಾಳುತ್ತಿದ್ದೇವೆ. ಆದರೆ ಕೆಲವರು ಉದ್ದೇಶಪೂರ್ವಕವಾಗಿ ಗ್ರಾಮದಲ್ಲಿ ಅಶಾಂತಿ ಸೃಷ್ಟಿಸುತ್ತಿದ್ದಾರೆ. ನೂರಾರು ವರ್ಷಗಳ ಹಿಂದೆ ನಮ್ಮ ಪೂರ್ವಿಕರು ಚಂದಾ ವಸೂಲಿ ಮಾಡಿ ನಿರ್ಮಿಸಿರುವ ಕೆರೆಯ ಜಮೀನನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದಾರೆ. ಕೆರೆಯ ನೀರು ಇಡೀ ಗ್ರಾಮಕ್ಕೆ ಆಸರೆಯಾಗಿತ್ತು. ಜಾನುವಾರುಗಳಿಗೆ ಕುಡಿಯುವ ನೀರು, ಅಕ್ಕಪಕ್ಕದ ಜಮೀನುಗಳಿಗೆ ವ್ಯವಸಾಯ ಹಾಗೂ ಅಂತರ್ಜಲ ವೃದ್ಧಿಗೂ ಈ ಕೆರೆ ನೀರಿನಿಂದ ಅನುಕೂವಾಗುತ್ತಿತ್ತು. ಇಂತಹ ಕೆರೆ ಏರಿಯನ್ನು ಒಡೆದು ಸಮತಟ್ಟು ಮಾಡಿ ಕೆಲವರು ಲಪಟಾಯಿಸಲು ಹುನ್ನಾರ ನಡೆಸಿದ್ದಾರೆ ಎಂದು ಆರೋಪಿಸಿದರು.
ಕೆರೆ ಏರಿ ಒಡೆದವರು, ಕೆರೆ ಜಮೀನನ್ನು ಅಕ್ರಮವಾಗಿ ಖಾತೆ ಮಾಡಿಕೊಟ್ಟಿರುವ ಅಧಿಕಾರಿ ಹಾಗೂ ಜಮೀನು ಸರ್ವೇ ಮಾಡಿ ಸುಳ್ಳು ದಾಖಲೆ ನೀಡಿರುವ ಸರ್ವೇಯರ್ ಅವರಿಗೆ ಕಾನೂನು ರೀತ್ಯಾ ಶಿಕ್ಷೆಯಾಗಬೇಕು ಎಂದು ಇದೇ ವೇಳೆ ಗ್ರಾಮಸ್ಥರು ಒತ್ತಾಯಿಸಿದರು. ಗ್ರಾಮಸ್ಥರ ದೂರುಗಳನ್ನು ಆಲಿಸಿದ ತಹಸೀಲ್ದಾರ್ ಅವರು ಲೋಕಸಭೆ ಚುನಾವಣೆ ಮುಗಿದ ಒಂದು ವಾರದೊಳಗೆ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಚುನಾವಣಾ ಬಹಿಷ್ಕಾರದಿಂದ ಹಿಂದೆ ಸರಿದರು.
ಈ ವೇಳೆ ಮೇಲುಕೋಟೆ ಪೊಲೀಸ್ ಇನ್‌ಸ್ಪೆಕ್ಟರ್ ಸಿದ್ದಪ್ಪ, ಕಂದಾಯ ನಿರೀಕ್ಷಕ ಮಹೇಶ್ ಹಾಗೂ ಹೊಸಕೋಟೆ ಗ್ರಾಮಸ್ಥರು ಇದ್ದರು.