ಗೃಹ ನಿರ್ಮಾಣ ಮಾಡಲು ಅನುಮತಿ ಪತ್ರ ತ್ವರಿತ ಗತಿಯಲ್ಲಿ ಆಗ್ರಹಿಸಿ ವಿಜಯಪುರದಲ್ಲಿ ಕರ್ನಾಟಕ ಮಾಹಿತಿ ಹಕ್ಕು ಹಾಗೂ ಕಡ್ಡಾಯ ಶಿಣ ಕಾಯಿದೆ ಕಾರ್ಯಕರ್ತರ ವೇದಿಕೆಯ ಪದಾಧಿಕಾರಿಗಳು ಶಾಸಕ ವಿಠಲ ಕಟಕಧೋಂಡ ಅವರಿಗೆ ಮನವಿ ಸಲ್ಲಿಸಿದರು. ಮಹಾದೇವ ಕದಂ, ಮಹಬೂಬ್​ ಮಾಲ್ಬೋಡಿ, ಅಶೋಕ ಚಂಚಲ್ಕರ ಮತ್ತಿತರರಿದ್ದಾರೆ. 
ಜಿಲ್ಲೆ

ಮನೆ ಕಟ್ಟಲು ಶ್ರೀ ಅನುಮತಿಗೆ ಆಗ್ರಹ

ಗಿರೀಶ ಸಗರ

ವಿಜಯಪುರ : ಗೃಹ ನಿರ್ಮಾಣ ಮಾಡಲು ಅನುಮತಿ ಪತ್ರ ತ್ವರಿತವಾಗಿ ನೀಡಲು ಆಗ್ರಹಿಸಿ ಕರ್ನಾಟಕ ಮಾಹಿತಿ ಹಕ್ಕು ಹಾಗೂ ಕಡ್ಡಾಯ ಶಿಣ ಕಾಯಿದೆ ಕಾರ್ಯಕರ್ತರ ವೇದಿಕೆಯ ಪದಾಧಿಕಾರಿಗಳು ಇತ್ತೀಚೆಗೆ ಜಿಲ್ಲಾಧಿಕಾರಿ ಟಿ. ಭೂಬಾಲನ್​, ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ ಹಾಗೂ ನಾಗಠಾಣ ಶಾಸಕ ವಿಠಲ ಕಟಕಧೋಂಡ ಅವರಿಗೆ ಪ್ರತ್ಯೇಕವಾಗಿ ಮನವಿ ಸಲ್ಲಿಸಿದರು.

ವೇದಿಕೆಯ ಜಿಲ್ಲಾಧ್ಯಕ್ಷ ಶ್ರೀಧರ ನಾರಾಯಣಕರ ಮಾತನಾಡಿ, ವಿಜಯಪುರ ಮಹಾ ನಗರ ಪಾಲಿಕೆಯು ಅಕ್ಟೋಬರ್​ 2024 ರಿಂದ ಸದ್ಯದವರೆಗೆ ರಿಂಗ್​ ರಸ್ತೆ (ವರ್ತುಲ ರಸ್ತೆ ) ಆಚೆಗಿನ ವಿಡಿಎ ಮತ್ತು ಸಿಎಂಸಿ ಅನುಮೋದಿತ ಬಡಾವಣೆಗಳಲ್ಲಿ ಗೃಹ ನಿರ್ಮಿಸಲು ಕಟ್ಟಡ ಪರವಾನಗಿ ನಿರಾಕರಿಸಲಾಗುತ್ತಿದೆ. ಅದರಿಂದ ಗೃಹ ನಿರ್ಮಾಣ ಮಾಡಲು ವಿಜಯಪುರ ನಿವಾಸಿಗಳಿಗೆ ತಮ್ಮ ಕನಸಿನ ಮನೆ ಕಟ್ಟಲು ಆಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪರವಾನಗಿ ನೀಡಿದ ಹಿನ್ನೆಲೆಯಲ್ಲಿ ಸುಮಾರು ಸಾವಿರಕ್ಕೂ ಹೆಚ್ಚು ಮನೆ ನಿರ್ಮಾಣ ಮಾಡಲು ಹೊರಟಿರುವ ನಿವಾಸಿಗಳಿಗೆ ನಿರಾಸೆಯಾಗಿದ್ದು, ಅಲ್ಲದೆ, ಕೋಟ್ಯಂತರ ರೂಪಾಯಿಗಳ ಸಿಎಂಸಿ ತೆರಿಗೆ (ಕಟ್ಟಡ ನಿರ್ಮಾಣ ಶುಲ್ಕ) ಕೂಡ ಮಹಾನಗರ ಪಾಲಿಕೆಗೆ ಸಂದಾಯವಾಗುತ್ತಿಲ್ಲ. ಕೂಡಲೇ ಈ ಕುರಿತು ಅಗತ್ಯ ಕ್ರಮ ಕೈಗೊಂಡು ಗೃಹ ನಿರ್ಮಾಣ ಮಾಡಲು ಅನುಮತಿ ಪತ್ರ ಅನುಮೋದಿಸಬೇಕೆಂದು ಮನವಿ ಮಾಡಿದರು.

ಮನವಿ ಸ್ವೀಕರಿಸಿದ ಬಳಿಕ ಪಾಲಿಕೆ ಆಯುಕ್ತರು ಪ್ರತಿಕ್ರಿಯಿಸಿ, ಕಟ್ಟಡ ನಿರ್ಮಾಣ ಪರವಾನಿಗೆ ತ್ವರಿತವಾಗಿ ಕೊಡುವುದಾಗಿ ಭರವಸೆ ನೀಡಿದರು.

ವೇದಿಕೆಯ ಸಂಗಮೇಶ ಜಾಧವ, ಮಹಾದೇವ ಕದಂ, ಮಹಬೂಬ್​ ಮಾಲ್ಬೋಡಿ, ಅಶೋಕ ಚಂಚಲ್ಕರ ಮತ್ತಿತರರಿದ್ದರು.