ಶಿವಮೊಗ್ಗ: ಶಿಕಾರಿಪುರ-ರಾಣೆಬೆನ್ನೂರು ರೈಲ್ವೆ ಮಾರ್ಗ ನಿರ್ಮಾಣಕ್ಕೆ ಅಗತ್ಯ ಅನುದಾನ ಬಿಡುಗಡೆ ಮಾಡಬೇಕು. ಯಶವಂತಪುರ-ಶಿವಮೊಗ್ಗ ಮಾರ್ಗದಲ್ಲಿ ವಂದೇ ಭಾರತ್ ರೈಲು ಸಂಚಾರಕ್ಕೆ ಕ್ರಮ ಕೈಗೊಳ್ಳಬೇಕೆಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ರೈಲ್ವೆ ಸಚಿವರನ್ನು ಒತ್ತಾಯಿಸಿದ್ದಾರೆ.
ಮಂಗಳವಾರ ದೆಹಲಿಯಲ್ಲಿ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಭೇಟಿಯಾದ ಬಿವೈಆರ್, ಈಗಾಗಲೇ ಡಿಪಿಆರ್ ಆಗಿರುವ, ಸಮೀಕ್ಷೆ ಹಂತದಲ್ಲಿರುವ ಹಾಗೂ ಬೇಡಿಕೆಯಿರುವ ಮಾರ್ಗಗಳ ಕುರಿತು ಸಚಿವರ ಗಮನಸೆಳೆದರು.
ಮಧ್ಯ ಕರ್ನಾಟಕದ ಪ್ರಮುಖ ಜಿಲ್ಲೆ ಶಿವಮೊಗ್ಗ ಇಂದು ಬಹಳಷ್ಟು ಅಭಿವೃದ್ಧಿಯಾಗಿದೆ. ವಂದೇ ಭಾರತ್‌ನಂತಹ ನವೀನ ರೈಲು ಸೇವೆಯನ್ನು ಇಲ್ಲಿನ ಜನರು ಬಯಸುತ್ತಿದ್ದಾರೆ. ಈ ರೈಲು ಬೆಳಗ್ಗೆ 6ಕ್ಕೆ ಯಶವಂತಪುರದಿಂದ ಹೊರಟು 9.15ಕ್ಕೆ ಶಿವಮೊಗ್ಗಕ್ಕೆ ಬರಬೇಕು. ಶಿವಮೊಗ್ಗದಿಂದ ಮಧ್ಯಾಹ್ನ 1ಕ್ಕೆ ಹೊರಟು 4.15ಕ್ಕೆ ಯಶವಂತಪುರ ತಲುಪಬೇಕು ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ ಎಂದು ರೈಲ್ವೆ ಸಚಿವರಿಗೆ ತಿಳಿಸಿದರು.
ಶಿವಮೊಗ್ಗ- ಶಿಕಾರಿಪುರ- ರಾಣೆಬೆನ್ನೂರು ರೈಲ್ವೆ ಮಾರ್ಗ ನಿರ್ಮಾಣಕ್ಕೆ ಸಂಬಂಧಿಸಿದಂತೆ ಮೊದಲ ಹಂತದಲ್ಲಿ ಶಿವಮೊಗ್ಗ-ಶಿಕಾರಿಪುರ ರೈಲ್ವೆ ಮಾರ್ಗ ನಿರ್ಮಾಣ ಆರಂಭವಾಗಿದೆ. ಎರಡನೇ ಹಂತದಲ್ಲಿ ಶಿಕಾರಿಪುರ- ರಾಣೆಬೆನ್ನೂರು ಭಾಗದಲ್ಲಿ ಭೂಸ್ವಾಧೀನ ಪ್ರಕ್ರಿಯೆ ಚುರುಕಾಗಬೇಕು. ಮೊದಲ ಹಂತದ ಕಾಮಗಾರಿಗೆ ಕೇಂದ್ರ ತನ್ನ ಪಾಲಿನ ಹಣ ಬಿಡುಗಡೆ ಮಾಡಬೇಕು. ಶಿವಮೊಗ್ಗ ನಿಲ್ದಾಣಕ್ಕೆ ಬರುವ ಹಾಗೂ ಶಿವಮೊಗ್ಗದಿಂದ ಸಂಚರಿಸುವ ಹಲವು ರೈಲುಗಳ ವೇಳಾಪಟ್ಟಿ ಜನಸ್ನೇಹಿಯಾಗಿಲ್ಲ. ಇದನ್ನು ಬದಲಾಯಿಸಬೇಕು. ಕೆಲವು ರೈಲುಗಳು ತಾತ್ಕಾಲಿಕವಾಗಿ ಸಂಚರಿಸುತ್ತಿವೆ. ಇವುಗಳ ಸೇವೆ ಕಾಯಂಗೊಳಿಸಬೇಕು ಎಂದು ಮನವಿ ಮಾಡಿದರು.
ಶಿವಮೊಗ್ಗ-ಬೆಂಗಳೂರು ಜನಶತಾಬ್ದಿ ರೈಲು ಹಾಗೂ ಕೆಲವು ಸೂಪರ್ ಫಾಸ್ಟ್ ರೈಲುಗಳ ಬೋಗಿಗಳು ತುಂಬ ಹಳೆಯದಾಗಿವೆ. ಕೋಚ್‌ನ ನಿರ್ವಹಣೆಗೆ ಪ್ರಯಾಣಿಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿ ಹಳೆಯ ಕೋಚ್‌ಗಳನ್ನು ಬದಲಿಸಿ ನೂತನ ಕೋಚ್ ಅಳವಡಿಸಬೇಕೆಂದು ಕೋರಿದರು.
ಶಿವಮೊಗ್ಗ-ಬೀರೂರು ಮಾರ್ಗದ ಡಬ್ಲಿಂಗ್ ಕಾರ್ಯಕ್ಕೆ ಈ ಹಿಂದೆಯೇ ಅನುಮೋದನೆ ಸಿಕ್ಕಿತ್ತು. ಆದರೆ ಆಗ ರೈಲುಗಳ ಸಂಖ್ಯೆ ಕಡಿಮೆಯಿದ್ದ ಕಾರಣ ಕಡೇ ಕ್ಷಣದಲ್ಲಿ ಯೋಜನೆ ನನೆಗುದಿಗೆ ಬಿದ್ದಿತ್ತು. ಇತ್ತೀಚೆಗೆ ಈ ಮಾರ್ಗದಲ್ಲಿ ರೈಲುಗಳ ಸಂಚಾರ ಹೆಚ್ಚಾಗಿದೆ. ಮುಂದಿನ ದಿನಗಳಲ್ಲಿ ಕೋಟೆಗಂಗೂರಿನಲ್ಲಿ ಕೋಚಿಂಗ್ ಡಿಪೋ ಆರಂಭ ಆಗುವುದರಿಂದ ಡಬ್ಲಿಂಗ್ ಕಾರ್ಯ ಅನಿವಾರ್ಯವಾಗಿದೆ. ಮುಂದಿನ ಬಜೆಟ್‌ನಲ್ಲಿ ಇದನ್ನು ಘೋಷಿಸಬೇಕೆಂದು ಬಿವೈಆರ್ ಮನವಿ ಮಾಡಿದರು.