ಜಿಲ್ಲೆ

ಉದ್ಯೋಗ ಖಾತರಿ ಯೋಜನೆ ಸದುಪಯೋಗಕ್ಕೆ ಮನವಿ

reportermys

ಮಡಿಕೇರಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ಗ್ರಾಮೀಣ ಸ್ವ-ಸಹಾಯ ಸಂಘದ ಮಹಿಳೆಯರು ಸದುಪಯೋಗ ಪಡಿಸಿಕೊಳ್ಳುವಂತೆ ಜಿ.ಪಂ.ಉಪ ಕಾರ್ಯದರ್ಶಿ ಜಿ.ಧನರಾಜು ಕರೆ ನೀಡಿದರು.


ನಗರದ ಜಿ.ಪಂ.ಕಚೇರಿಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿ ಜಿಲ್ಲೆಯ ಎಲ್‌ಸಿಆರ್‌ಪಿ ಮತ್ತು ಎಂಬಿಕೆ ಗಳಿಗೆ ಆಯೋಜಿಸಿದ್ದ ಒಂದು ದಿನದ ತರಬೇತಿ ಕಾರ್ಯಾಗರಕ್ಕೆ ಚಾಲನೆ ನೀಡಿ ಮಾತನಾಡಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಮನರೇಗಾ ಯೋಜನೆ ಪ್ರಮುಖವಾಗಿದೆ. ಗ್ರಾಮೀಣ ಭಾಗದಲ್ಲಿ ವಲಸೆಯನ್ನು ತಪ್ಪಿಸಿ, ತಮ್ಮೂರಿನಲ್ಲಿಯೇ ೧೦೦ ದಿನಗಳ ಉದ್ಯೋಗವನ್ನು ಕುಟುಂಬಕ್ಕೆ ನೀಡಲಾಗುತ್ತಿದೆ. ಜಿಲ್ಲೆಯಲ್ಲಿಯೂ ಮನರೇಗಾ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗುತ್ತದೆ. ವೈಯಕ್ತಿಕ ಮತ್ತು ಸಮುದಾಯ ಕಾಮಗಾರಿಗಳ ಮೂಲಕ ಗ್ರಾಮದ ಅಭಿವೃದ್ಧಿಯ ಜತೆಗೆ ದುರ್ಬಲ ವರ್ಗಗಳ ಸಬಲೀಕರಣವೂ ನಡೆಯುತ್ತಿದೆ ಎಂದರು.


ಜಿ.ಪಂ.ಯೋಜನಾ ನಿರ್ದೇಶಕ ಜಗದೀಶ್ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಮಹಿಳೆಯರ ಸಬಲೀಕರಣಕ್ಕಾಗಿ ಸಂಜೀವಿನಿ ಒಕ್ಕೂಟಗಳ ಮೂಲಕ ಸರ್ಕಾರ ಹಲವಾರು ಕಾರ್ಯಕ್ರಮ ಹಮ್ಮಿಕೊಂಡಿದೆ. ಈ ಮೂಲಕ ಎನ್‌ಆರ್‌ಎಲ್‌ಎಂ ಹಾಗೂ ಉದ್ಯೋಗ ಖಾತ್ರಿ ಯೋಜನೆಯ ಸಂಯೋಜನೆಯೊಂದಿಗೆ ಅಣಬೆ ಶೆಡ್, ಸಂಜೀವಿನ್ ಶೆಡ್ ಗಳನ್ನು ನಿರ್ಮಿಸಿಕೊಳ್ಳಬಹುದು ಎಂದರು.


ಜಿಲ್ಲಾ ಪಂಚಾಯಿತಿ ವತಿಯಿಂದ ನಡೆದ ಮಾಹಿತಿ ಕಾರ್ಯಾಗಾರದಲ್ಲಿ ಅನುಷ್ಠಾನ ಇಲಾಖೆಯ ಅಧಿಕಾರಿಗಳೇ ಖುದ್ದು ಯೋಜನೆಯ ಮಾಹಿತಿ ನೀಡಿದರು. ತೋಟಗಾರಿಕಾ ಇಲಾಖೆ ಮತ್ತು ಮನರೇಗಾ ಸಹಯೋಗದೊಂದಿಗೆ ಕೈಗೊಳ್ಳಬಹುದಾದ ಕಾಮಗಾರಿಗಳ ಬಗ್ಗೆ ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕ ಪ್ರಮೋದ್, ಅಣಬೆ ಬೇಸಾಯದ ಕುರಿತು ಎ.ಎಚ್.ಒ ಕಾವ್ಯ ಇತರರು ಮಾಹಿತಿ ನೀಡಿದರು.


ಈ ಸಂದರ್ಭದಲ್ಲಿ ಇಂಡಿಯಾ ಪೋಸ್ಟಲ್ ಪೇಮೆಂಟ್ ಸಂಬಂಧಿಸಿದಂತೆ ನಾಗರಾಜ್, ಇ-ಶ್ರಮ್ ಯೋಜನೆ ಕುರಿತಂತೆ ಹಿರಿಯ ಕಾರ್ಮಿಕ ನಿರೀಕ್ಷಕ ಎಂ.ಎಂ.ಯತ್ನಟ್ಟಿರವರು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಮುಖ್ಯ ಯೋಜನಾಧಿಕಾರಿ ರಾಜ್ ಗೋಪಾಲ್, ಮುಖ್ಯ ಲೆಕ್ಕಾಧಿಕಾರಿ ಝೀವಲ್ ಖಾನ್, ಗ್ರಾಮೀಣ ಉದ್ಯೋಗ ಸಹಾಯಕ ನಿರ್ದೇಶಕರಾದ ರವೀಶ್ ಇತರರು ಇದ್ದರು.