ರಾಮನಗರ: ಮುಂಗಾರು ಮುಗಿದಿದೆ, ಹಿಂಗಾರು ಆರಂಭಗೊಂಡಿದೆ. ಆದರೆ, ಜಿಲ್ಲೆಯಲ್ಲಿ ಪರಿಸ್ಥಿತಿ ಬದಲಾಗಲೇ ಇಲ್ಲ. ಮುಂಗಾರು ಅವಧಿಯಲ್ಲಿ ಉಂಟಾದ ಮಳೆ ಕೊರತೆ ಕಾರಣದಿಂದಾಗಿ ನಷ್ಟ ಅನುಭವಿಸುತ್ತಿರುವ ರೈತರಿಗೆ ಪರಿಹಾರ ದೊರಕಿಸಿಕೊಡುವ ನಿಟ್ಟಿನಲ್ಲಿ ಜಿಲ್ಲಾಡಳಿತ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಿದ್ದು, 511 ಕೋಟಿ ರೂ. ಪರಿಹಾರ ಕೋರಿದೆ.
ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿ ಆಧರಿಸಿ ರಾಜ್ಯ ಸರ್ಕಾರ ಮೊದಲಿಗೆ ರಾಮನಗರ ಮತ್ತು ಮಾಗಡಿ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿತ್ತು. 2026ರ ಜೂನ್‌ನಿಂದ ಆಗಸ್ಟ್‌ವರೆಗೆ ರಾಮನಗರ ತಾಲೂಕಿನಲ್ಲಿ ಶೇ.36 ಹಾಗೂ ಮಾಗಡಿಯಲ್ಲಿ ಶೇ.41 ಮಳೆ ಕೊರತೆಯಾಗಿತ್ತು. ಆದರೆ, ಇದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿ ಉಳಿದ ಮೂರು ತಾಲೂಕುಗಳನ್ನು ಬರಪೀಡಿತ ಪಟ್ಟಿಗೆ ಸೇರಿಸಬೇಕು ಎನ್ನುವ ಕೂಗು ಎದ್ದಿತ್ತು. ಚನ್ನಪಟ್ಟಣ, ಕನಕಪುರ ಮತ್ತು ಹಾರೋಹಳ್ಳಿ ತಾಲೂಕುಗಳಲ್ಲೂ ಮಳೆ ಕೊರತೆಯಿಂದ ಬೆಳೆಗಳು ಒಣಗುವ ಹಂತ ತಲುಪಿದ್ದ ಹಿನ್ನೆಲೆಯಲ್ಲಿ ರೈತರು ಬರಪೀಡಿತ ಪಟ್ಟಿಗೆ ಸೇರಿಸುವಂತೆ ಒತ್ತಾಯಿಸುತ್ತಿದ್ದರು. ಕೃಷಿ ಅಧಿಕಾರಿಗಳ ವರದಿ ಆಧರಿಸಿ ಇದೀಗ ಇಡೀ ಜಿಲ್ಲೆಯನ್ನು ಬರಪೀಡಿತ ಎಂದು ಘೋಷಿಸಲಾಗಿದೆ.
ಕೈ ಕೊಟ್ಟ ಮಳೆ: ಜಿಲ್ಲೆಯಲ್ಲಿ ಪ್ರತಿ ವರ್ಷ ಮುಂಗಾರು ಹಂಗಾಮಿನಿನಲ್ಲಿ ವಾಡಿಕೆಯಂತೆ 436.1 ಮಿ ಮೀ ಮಳೆ ಆಗಬೇಕಿತ್ತು. ಆದರೆ, ಈ ಬಾರಿ ಮುಂಗಾರು ಅಂತ್ಯಕ್ಕೆ ಬಿದ್ದಿರುವ ಮಳೆ ಪ್ರಮಾಣ 357.6 ಮಿ ಮೀ ಮಾತ್ರ, ಅಂದರೆ ಒಟ್ಟಾರೆ ಶೇ.18 ಮಳೆ ಕೊರತೆ ಆಗಿದೆ. ಆದರೆ, ಬಿತ್ತನೆ ಅವಧಿದಾಗ ಜುಲೈ ಮಧ್ಯಭಾಗ ಮತ್ತು ಆಗಸ್ಟ್‌ನಲ್ಲಿ ಜಿಲ್ಲೆಯಲ್ಲಿ ಮಳೆ ಸಂಪೂರ್ಣ ಕೈಕೊಟ್ಟ ಕಾರಣದಿಂದಾಗಿ ಜಿಲ್ಲೆಯಲ್ಲಿ ಬಿತ್ತನೆ ಕುಂಠಿತವಾಗಿದೆ. ಜುಲೈನಲ್ಲಿ ಶೇ.78 ಮತ್ತು ಆಗಸ್ಟ್‌ನಲ್ಲಿ ಶೇ.30 ಮಳೆ ಕೊರತೆ ಆಗಿತ್ತು. ಕೆಲವು ಪ್ರದೇಶದಲ್ಲಿ ಅಷ್ಟಿಷ್ಟು ಬಿದ್ದ ಮಳೆ ಬಿತ್ತನೆಗೆ ಅವಕಾಶ ಮಾಡಿಕೊಟ್ಟಿತ್ತಾದರೂ, ನಂತರದ ದಿನಗಳಲ್ಲಿ ಕೈ ಕೊಟ್ಟ ಕಾರಣ ಬೆಳೆ ನೆಲ ಕಚ್ಚಿತ್ತು.
ಕೆರೆಗಳಲ್ಲೂ ನೀರಿನ ಪ್ರಮಾಣ ಕುಸಿತ
ಮುಂಗಾರು ಮುಕ್ತಾಯದ ವೇಳೆಗೆ ಕೆರೆಗಳು ತುಂಬಿ ಕೋಡಿ ಹರಿಯಬೇಕಿದ್ದರೂ ಸೆಸ್ಪೆಂಬರ್ ಅಂತ್ಯಕ್ಕೆ ಜಿಲ್ಲೆಯ ಕೆರೆಗಳಲ್ಲಿ ನೀರಿನ ಪ್ರಮಾಣ ಗಣನೀಯವಾಗಿ ಕುಸಿದಿದೆ. ಸಣ್ಣ ನೀರಾವರಿ ವಿಭಾಗದ ವ್ಯಾಪ್ತಿಯ 99 ಕೆರೆಗಳ ಒಟ್ಟು ಸಂಗ್ರಹ ಸಾಮರ್ಥ್ಯ 5 ಟಿಎಂಸಿ ಇದ್ದು, ಪ್ರಸ್ತುತ 1.27 ಟಿಎಂಸಿ ನೀರು ಮಾತ್ರ ಲಭ್ಯವಿದೆ. 74 ಕೆರೆಗಳಲ್ಲಿ ಶೇ.30ಕ್ಕಿಂತ ಕಡಿಮೆ ನೀರಿದೆ. 18 ಕೆರೆಗಳಲ್ಲಿ ಶೇ.50 ಹಾಗೂ ಐದು ಕೆರೆಗಳಲ್ಲಿ ಶೇ.80 ನೀರಿನ ಸಂಗ್ರಹವಿದೆ. ಎರಡು ಕೆರೆಗಳು ಮಾತ್ರ ಸಂಪೂರ್ಣ ಭರ್ತಿಯಾಗಿವೆ.
ಬೆಳೆ ಹಾನಿ
ಜಿಲ್ಲೆಯಲ್ಲಿ ಮಳೆ ಕೊರತೆಯಿಂದಾಗಿ ಉಂಟಾಗಿರುವ ಹಾನಿಯನ್ನು ಕೃಷಿ, ತೋಟಗಾರಿಕೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಜಂಟಿ ಸಮೀಕ್ಷೆ ನಡೆಸಿ ಸಿದ್ಧಪಡಿಸಿದ್ದಾರೆ. ರಾಮನಗರ ತಾಲೂಕಿನಲ್ಲಿ 6,942 ಹೆಕ್ಟೇರ್ ಹಾಗೂ ಮಾಗಡಿಯಲ್ಲಿ 17,775 ಹೆಕ್ಟೇರ್ ಪ್ರದೇಶದ ರಾಗಿ ಬೆಳೆ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ.
ಚನ್ನಪಟ್ಟಣದಲ್ಲಿ 2,950 ಹೆಕ್ಟೇರ್ ರಾಗಿ, ಕನಕಪುರದಲ್ಲಿ 17,025 ಹೆಕ್ಟೇರ್ ರಾಗಿ ಮತ್ತು ಶೇಂಗಾ, ಹಾರೋಹಳ್ಳಿಯಲ್ಲಿ 7,552 ಹೆಕ್ಟೇರ್ ರಾಗಿ ಮತ್ತು ಶೇಂಗಾ ಬೆಳೆ ಹಾನಿಯಾಗಿರುವುದು ಜಂಟಿ ಸಮೀಕ್ಷೆಯಲ್ಲಿ ಕಂಡುಬಂದಿದೆ. ಒಟ್ಟಾರೆ 52,244 ಹೆಕ್ಟೇರ್ ಬೆಳೆ ಹಾನಿಯಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
511 ಕೋಟಿ ರೂಪಾಯಿ ಬೆಳೆ ನಷ್ಟ
ಮೊದಲ ಹಂತದಲ್ಲಿ ಬರ ಘೋಷಣೆಯಾದ ರಾಮನಗರ ಮತ್ತು ಮಾಗಡಿ ತಾಲೂಕುಗಳಲ್ಲಿ 240.22 ಕೋಟಿ ಬೆಳೆ ನಷ್ಟವಾಗಿರುವುದಾಗಿ ಅಂದಾಜಿಸಲಾಗಿದೆ. ಚನ್ನಪಟ್ಟಣ, ಕನಕಪುರ ಹಾಗೂ ಹಾರೋಹಳ್ಳಿ ತಾಲೂಕುಗಳಲ್ಲಿ 260.90 ಕೋಟಿ ನಷ್ಟವಾಗಿದೆ. ಜಿಲ್ಲೆಯ ಐದು ತಾಲೂಕುಗಳ ಒಟ್ಟು ಬೆಳೆ ನಷ್ಟ 511.30 ಕೋಟಿಯಷ್ಟಾಗಿದೆ ಎಂದು ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಜಂಟಿ ಸಮೀಕ್ಷೆಯ ಆಧಾರದ ಮೇಲೆ ಎನ್‌ಡಿಆರ್‌ಎ್ ಮತ್ತು ಎಸ್‌ಡಿಆರ್ ಎ್ ಮಾರ್ಗಸೂಚಿಗಳ ಅನ್ವಯ ಜಿಲ್ಲೆಗೆ ಸುಮಾರು 52 ಕೋಟಿ ಬರ ಪರಿಹಾರ ದೊರೆಯುವ ನಿರೀಕ್ಷೆಯಿದೆ ಎನ್ನುವುದು ಅಧಿಕಾರಿಗಳ ಅಭಿಪ್ರಾಯ.
ಸರ್ಕಾರ ಜಿಲ್ಲೆಯ ಐದು ತಾಲೂಕುಗಳನ್ನು ಬರ ಪೀಡಿತ ಎಂದು ೋಷಿಸಿದೆ. ಈ ಹಿನ್ನೆಲೆಯಲ್ಲಿ ವಿವಿಧ ಇಲಾಖೆಗಳ ಸಿಬ್ಬಂದಿ ಜಂಟಿ ಸರ್ವೇ ನಡೆಸಿ 500 ಕೋಟಿಗೂ ಅಧಿಕ ಬೆಳೆ ನಷ್ಟವಾಗಿರುವ ಬಗ್ಗೆ ವರದಿ ಸಲ್ಲಿಸಲಾಗಿದೆ. ಎನ್‌ಡಿಆರ್‌ಎ್ ಹಾಗೂ ಎಸ್‌ಡಿಆರ್‌ಎ್ ಮಾರ್ಗಸೂಚಿಗಳ ಅನ್ವಯ ಜಿಲ್ಲೆಗೆ 52 ಕೋಟಿ ರೂ. ಪರಿಹಾರ ಮೊತ್ತ ಬರುವ ನಿರೀಕ್ಷೆಯಿದೆ.
ಯಶವಂತ್ ವಿ. ಗುರುಕರ್, ಜಿಲ್ಲಾಧಿಕಾರಿ, ಬೆಂಗಳೂರು ದಕ್ಷಿಣ ಜಿಲ್ಲೆ