ಕೋಲಾರ ಕ್ಷೇತ್ರದ ಹೆದ್ದಾರಿ ಅನುದಾನ ಕುರಿತು ಮಂಗಳವಾರ ದೆಹಲಿಯಲ್ಲಿ ಸಚಿವ ನೀತಿನ್​ ಗಡ್ಕರಿ ಅವರೊಂದಿಗೆ ಕೋಲಾರ ಸಂಸದ ಎಂ.ಮಲ್ಲೇಶ್​ಬಾಬು, ಕೇಂದ್ರ ಸಚಿವ ಎಚ್​.ಡಿ.ಕುಮಾರಸ್ವಾಮಿ ಚರ್ಚಿಸಿದರು. 
ಜಿಲ್ಲೆ

ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗೆ ಮನವಿ

ಕಾಮಗಾರಿ ತ್ವರಿತಗತಿಯಲ್ಲಿ ಮುಗಿಸಲು ದೆಹಲಿಯಲ್ಲಿ ಕೇಂದ್ರ ಸಚಿವ ನಿತಿನ್​ ಗಡ್ಕರಿ ಭೇಟಿ ಮಾಡಿದ ಸಂಸದ ಮಲ್ಲೇಶ್​ಬಾಬು

ಕೋಲಾರ: ಬೆಂಗಳೂರು& ಚೆನ್ನೈ ರಾಷ್ಟ್ರೀಯ ಹೆದ್ದಾರಿ&75ರ ಕಾಮಗಾರಿ ಪ್ರಗತಿಯಲ್ಲಿದ್ದು, ತ್ವರಿತಗತಿಯಲ್ಲಿ ಮುಗಿಸಲು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚಿಸಬೇಕು ಎಂದು ಒತ್ತಾಯಿಸಿ ಸಂಸದ ಎಂ.ಮಲ್ಲೇಶ್​ಬಾಬು
ಅವರು ಹೆದ್ದಾರಿ ಸಚಿವ ನಿತಿನ್​ ಗಡ್ಕರಿ ಅವರಿಗೆ ದೆಹಲಿಯಲ್ಲಿ ಮಂಗಳವಾರ ಮನವಿ ಸಲ್ಲಿಸಿದರು.
ಕೆ.ಆರ್​.ಪುರಂನಿಂದ ಆಂಧ್ರ ಗಡಿವರೆಗೂ ರಾಷ್ಟ್ರೀಯ ಹೆದ್ದಾರಿ&75ರಲ್ಲಿ ನಡೆಯುತ್ತಿರುವ ಮೇಲ್ಸೇತುವೆ ಕಾಮಗಾರಿಯನ್ನು ತ್ವರಿತ ಗತಿಯಲ್ಲಿ ಮುಗಿಸಿ ವಾಹನ ಸವಾರರಿಗೆ ಅನುಕುಲ ಮಾಡಿಕೊಡಬೇಕು. ಜತೆಗೆ ಕ್ಷೇತ್ರದಲ್ಲಿ ಹೆದ್ದಾರಿಗಳನ್ನು ಅಭಿವೃದ್ಧಿ ಪಡಿಸಲು ಕೇಂದ್ರ ಸರ್ಕಾರದಿಂದ ವಿಶೇಷ ಪ್ಯಾಕೇಜ್​ ಮಂಜೂರು ಮಾಡಬೇಕು ಎಂದು ಮನವಿ ಮಾಡಿದ್ದಾರೆ.ಮಾಲೂರು, ಬಂಗಾರಪೇಟೆ, ಕೆಜಿಎಫ್​ ಮೂಲಕ ಹಾದು ಹೋಗಿರುವ ಚೈನೈ ಎಕ್ಸ್​ಪ್ರೆಸ್​ ಕಾರಿಡಾರ್​ ರಸ್ತೆಗೆ ರೈತರು ಭೂಮಿ ನೀಡಿದು,್ದ ಸಣ್ಣಪುಟ್ಟ ಸಮಸ್ಯೆಗಳಿಂದ ಕಾಮಗಾರಿ ವಿಳಂಬವಾಗುತ್ತಿದೆ. ಕೆಲ ರೈತರಿಗೆ ಪರಿಹಾರ ಹಣದ ವಿಚಾರವಾಗಿ ಗೊಂದಲಗಳಿದ್ದು, ಆದಷ್ಟು ಬೇಗ ಈ ಎಲ್ಲ ಸಮಸ್ಯೆಗಳನ್ನು ಬಗೆಹರಿಸಿ ರೈತರಿಗೆ ನ್ಯಾಯ ದೊರಕಿಸಬೇಕು ಎಂದು ಮನವಿ ಮಾಡಿದ್ದಾರೆ.
ಲೋಕಸಭಾ ಕ್ಷೇತ್ರದ ಎಂಟು ವಿಧಾನಸಭಾ ಕ್ಷೇತ್ರಗಳಿಂದ ಬೇರೆ ಬೇರೆ ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಗಳನ್ನು ಅಭಿವೃದ್ಧಿಪಡಿಸಬೇಕು. ಹೊಸ ರಸ್ತೆ ಮಾರ್ಗಗಳನ್ನು ಕೋಲಾರ ಲೋಕಸಭಾ ಕ್ಷೇತ್ರಕ್ಕೆ ನೀಡಬೇಕು. ಇದರಿಂದ ಗಡಿ ಭಾಗಗಳಲ್ಲಿ ಅಭಿವೃದ್ಧಿಗೆ ಹೊಸ ಚೈತನ್ಯ ಬರಲಿದೆ. ಇದರಿಂದ ಕೈಗಾರಿಕೆಗಳು ಅನುಷ್ಠಾನಗೊಂಡಲ್ಲಿ ನಿರುದ್ಯೋಗ ಸಮಸ್ಯೆಯು ನಿವಾರಣೆಯಾಗುತ್ತದೆ. ಆಂದ್ರದ ಮುಖ್ಯಮಂತ್ರಿ ಚಂದ್ರಬಾಬು ನಾಯ್ದು ಅವರು ಎನ್​ಡಿಎ ಕೂಟದ ಭಾಗವಾಗಿದ್ದು, ಅವರೊಂದಿಗೆ ಚರ್ಚಿಸಿ ಕೃಷ್ಣಾ ನದಿಯ ನೀರನ್ನು ಜಿಲ್ಲೆಗೆ ಹರಿಸಲು ಯೋಜನೆ ವಿಸ್ತರಿಸಬೇಕು ಎಂದು ಕೋರಿದ್ದಾರೆ.
ಕ್ಷೇತ್ರದ ಮಾಜಿ ಸಂಸದ ಎಸ್​.ಮುನಿಸ್ವಾಮಿ ಅವರ ಅವಧಿಯಲ್ಲಿ ಲೋಕಸಭಾ ಕ್ಷೇತ್ರದಲ್ಲಿ ಕೈಗೊಂಡಿದ್ದ ರಸ್ತೆ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸಬೇಕು. ಆಂಧ್ರಪ್ರದೇಶ&ತಮಿಳುನಾಡು ಗಡಿಗೆ ಹೊಂದಿಕೊಂಡಿರುವ ಕೆಜಿಎಫ್​, ಮುಳಬಾಗಿಲು, ಶ್ರೀನಿವಾಸಪುರ ಮತ್ತು ಮಾಲೂರು ಗಡಿ ಭಾಗಗಳಲ್ಲಿ ಕೈಗಾರಿಕೆಗಳನ್ನು ಸ್ಥಾಪನೆ ಮಾಡಲು ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ. ಸಂಸದ ಎಂ.ಮಲ್ಲೇಶ್​ ಬಾಬು ಮನವಿಗೆ ಸ್ಪಂದಿಸಿದ ಕೇಂದ್ರ ಸಚಿವ ನೀತಿನ್​ ಗಡ್ಕರಿ ಅವರು, ಕೂಡಲೇ ಅಧಿಕಾರಿಗಳ ಸಭೆ ಕರೆದು ಸಮಸ್ಯೆಗಳನ್ನು ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.ಕೇಂದ್ರ ಉಕ್ಕು ಮತ್ತು ಬೃಹತ್​ ಕೈಗಾರಿಕಾ ಸಚಿವ ಎಚ್​.ಡಿ.ಕುಮಾರಸ್ವಾಮಿ ಹಾಜರಿದ್ದರು.