ಬೆಂಗಳೂರು: ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬೆಟ್ಟಹಲಸೂರು ಗ್ರಾಮ ಪಂಚಾಯತಿಯ ಅಭಿವೃದ್ಧಿ ಕಾರ್ಯಕ್ಕೆ ವಿಶೇಷ ಅನುದಾನ ಒದಗಿಸುವಂತೆ ಕೋರಿ ಸ್ಥಳೀಯ ಸಂಸದೆಯೂ ಆದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಗ್ರಾಪಂ ವತಿಯಿಂದ ಅಹವಾಲು ಪತ್ರ ಸಲ್ಲಿಸಲಾಯಿತು.
ರಾಜ್ಯ ಬಿಜೆಪಿ ಕಾರ್ಯದರ್ಶಿ ತಮ್ಮೇಶ್ ಗೌಡ ನೇತೃತ್ವದಲ್ಲಿ ಬೆಟ್ಟಹಲಸೂರು ಗ್ರಾಮ ಪಂಚಾಯತಿಯ ಅಧ್ಯಕ್ಷರು ಹಾಗೂ ಸದಸ್ಯರು ಸಚಿವರನ್ನು ಭೇಟಿ ಮಾಡಿ ಪಂಚಾಯಿತಿಯ ಸರ್ವತೋಮುಖ ಅಭಿವೃದ್ಧಿಗಾಗಿ ಮನವಿ ಮಾಡಿಕೊಳ್ಳಲಾಯಿತು.
ಬೆಟ್ಟಹಲಸೂರು ಗ್ರಾಮದಿಂದ ಕುದುರೆಗೆರೆ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿ ರೈಲ್ವೆ ಅಂಡರ್‌ಪಾಸ್, ಸುಗ್ಗಟ್ಟ ಗ್ರಾಮದಿಂದ ಗಂಟಿಗಾನಹಳ್ಳಿ ಗ್ರಾಮದ ಮಾರ್ಗದಲ್ಲಿರುವ ರೈಲ್ವೆಗೇಟ್ ಸ್ಥಳದಲ್ಲಿ ಅಂಡರ್‌ಪಾಸ್ ನಿರ್ಮಾಣ, ಸರ್ ಎಂವಿಐಟಿ ಕಾಲೇಜಿನ ತಿರುವಿನ ರಸ್ತೆಯಲ್ಲಿ ಸ್ಕೈವಾಕ್ ನಿರ್ಮಾಣ ಸೇರಿದಂತೆ ಬೆಟ್ಟಹಲಸೂರು ಗ್ರಾಮ ಪಂಚಾಯಿತಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಂಸದರ ವಿಶೇಷ ಅನುದಾನ ಬಿಡುಗಡೆ ಮಾಡುವಂತೆ ಗ್ರಾಪಂ ಅಧ್ಯಕ್ಷೆ ಹೇಮಾವತಿ ನಾಗರಾಜ್ ಬಾಬು ಸಚಿವರನ್ನು ಕೋರಿದರು.
ಈ ವೇಳೆ ಬಿಜೆಪಿಯ ಬೆಂಗಳೂರು ಉತ್ತರ ಜಿಲ್ಲೆಯ ಅಧ್ಯಕ್ಷ ಎಸ್.ಹರೀಶ್, ನಗರ ಮಂಡಲ ಅಧ್ಯಕ್ಷ ಕೃಷ್ಣಮೂರ್ತಿ, ಗ್ರಾಮಾಂತರ ಮಂಡಲ ಅಧ್ಯಕ್ಷ ಹನುಮಂತೇಗೌಡ, ಯುವ ಮೋರ್ಚಾ ರಾಜ್ಯ ಕಾರ್ಯದರ್ಶಿ ದೀಪಕ್, ಬೆಟ್ಟಹಲಸೂರು ಗ್ರಾಪಂ ಮಾಜಿ ಅಧ್ಯಕ್ಷ ಅನಿಲ್ ಕುಮಾರ್, ಮುಖಂಡರಾದ ಮಧುಸೂದನ್, ಶ್ರೀಕಂಠಮೂರ್ತಿ ಹಾಗೂ ಇತರರಿದ್ದರು.