ಕುಶಾಲನಗರ: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನವಗ್ರಾಮಕ್ಕೆ ವಿದ್ಯುತ್ ಕಂಬಗಳ ಅವಶ್ಯಕತೆ ಇದೆ ಎಂದು ಸ್ಥಳೀಯ ವಾರ್ಡ್ ಸದಸ್ಯ ಕೆ.ಬಿ.ಶಂಶುದ್ಧೀನ್ ಅವರು ಚೆಸ್ಕಾಂಗೆ ಮನವಿ ಸಲ್ಲಿಸಿದ ಹಿನ್ನಲೆ ಚೆಸ್ಕಾಂ ಇಲಾಖೆಯ ಎಇ ಸುಮೇಶ್ ಭೇಟಿ ಪರಿಶೀಲನೆ ನಡೆಸಿದರು.
ನವಗ್ರಾಮದ ಅಂಗನವಾಡಿ ಬಳಿ ಹತ್ತಕ್ಕೂ ಹೆಚ್ಚು ಮನೆಗಳಿಗೆ ಒಂದೇ ವಿದ್ಯುತ್ ಕಂಬವಿರುವ ಬಗ್ಗೆ ಸ್ಥಳೀಯರು ವಾರ್ಡ್ ಭೇಟಿ ಸಂದರ್ಭ ಸದಸ್ಯರಾದ ಕೆ.ಬಿ.ಶಂಶುದ್ಧೀನ್ ಅವರ ಗಮನಕ್ಕೆ ತಂದಿದ್ದರು. ನಂತರ ಸ್ಥಳ ಪರಿಶೀಲಿಸಿದ ಕೆ.ಬಿ.ಶಂಶುದ್ಧೀನ್ ಅವರು, ಸಂಬಂಧಿಸಿದ ಚೆಸ್ಕಾಂ ನ ಸಹಾಯಕ ನಿರ್ವಾಹಕ ಅಭಿಯಂತರ ಗಮನಕ್ಕೆ ತಂದಿದ್ದರು. ಅದರಂತೆ ಚೆಸ್ಕಾಂನ ಅಧಿಕಾರಿ ಸ್ಥಳ ಪರಿಶೀಲನೆ ನಡೆಸಿದ್ದು, ವಿದ್ಯುತ್ ಕಂಬ ಅಳವಡಿಸುವುದಾಗಿ ಭರವಸೆ ನೀಡಿದ್ದಾರೆ.
ಈ ಕುರಿತು ಮಾತನಾಡಿದ ಕೂಡುಮಂಗಳೂರು ಗ್ರಾಮ ಪಂಚಾಯಿತಿ ಸದಸ್ಯ ಕೆ.ಬಿ.ಶಂಶುದ್ಧೀನ್, ನವಗ್ರಾಮದ ಅಂಗನವಾಡಿ ಬಳಿ ಸುಮಾರು ೧೧ ಮನೆಗಳಿಗೆ ಒಂದೇ ವಿದ್ಯುತ್ ಕಂಬವಿದೆ. ನಾಳೆಯ ದಿನ ಅನಾಹುತ ಸಂಭವಿಸುವ ಸಾಧ್ಯತೆಗಳೂ ಇದೆ. ಆದ್ದರಿಂದ ವಿದ್ಯುತ್ ಕಂಬಗಳನ್ನು ಅಳವಡಿಸಬೇಕು ಎಂದು ಸಂಬಂಧಿಸಿದ ಚೆಸ್ಕಾಂನ ಎಇಇ ಗೆ ಮನವಿ ಮಾಡಿದ ಕೂಡಲೇ ಸ್ಥಳಪರಿಶೀಲನೆ ನಡೆಸಿ ವಿದ್ಯುತ್ ಕಂಬ ಅಳವಡಿಸುವ ಬಗ್ಗೆ ಭರವಸೆ ನೀಡಿದ್ದಾರೆ. ಗುಡ್ಡ ಪ್ರದೇಶವಾದ್ದರಿಂದ ಕಾಡು ಪ್ರಾಣಿಗಳ ಕಾಟ ಹೆಚ್ಚಿದ್ದು, ವಿದ್ಯುತ್ ಕಂಬ ಅಳವಡಿಕೆಯ ನಂತರ ಕಂಬಕ್ಕೆ ವಿದ್ಯುತ್ ದೀಪ ಅಳವಡಿಸಲಾಗುವುದು ಎಂದರು.
ಈ ಸಂದರ್ಭ ಸ್ಥಳೀಯರು ಇದ್ದರು.