ಜಿಲ್ಲೆ

ಮರುತನಿಖೆ ಶೀಘ್ರವೇ ಪೂರ್ಣಗೊಳಿಸಲು ಆಗ್ರಹ

ವೀರೇಶ ಸೌದ್ರಿ

ಭಟ್ಕಳ: ಯಮುನಾ ನಾಯ್ಕ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಮರುತನಿಖೆಯನ್ನು ನ್ಯಾಯಾಲಯದ ಆದೇಶದಂತೆ ಶೀಘ್ರವೇ ಮುಗಿಸಬೇಕು ಎಂದು ಶ್ರೀರಾಮ ಸೇನೆ ರಾಜ್ಯ ಅಧ್ಯಕ್ಷ ಗಂಗಾಧರ ಕುಲಕರ್ಣಿ ಒತ್ತಾಯಿಸಿದರು.

ಇಲ್ಲಿನ ನಿಶ್ಚಲಮಕ್ಕಿ ತಿರುಮಲ ವೆಂಕಟರಮಣ ದೇವಸ್ಥಾನ ಸಭಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
2010ರ ಅಕ್ಟೋಬರ್ 23ರಂದು ಯಮುನಾ ನಾಯ್ಕ ಕೊಲೆಯಾಗಿತ್ತು. ವೆಂಕಟೇಶ ಹರಿಕಾಂತ ಎನ್ನುವ ಅಮಾಯಕ ವ್ಯಕ್ತಿಯನ್ನು ಬಂಧಿಸಿ ಆರು ವರ್ಷ ಎಂಟು ತಿಂಗಳು ನರಕಯಾತನೆ ಅನುಭವಿಸುವಂತೆ ಮಾಡಲಾಯಿತು. 2017ರಲ್ಲಿ ಹೈಕೋರ್ಟ್ ವೆಂಕಟೇಶ ಹರಿಕಾಂತನನ್ನು ನಿರಪರಾಧಿ ಎಂದು ಬಿಡುಗಡೆ ಮಾಡಿದೆ. ಅಲ್ಲದೆ ಪ್ರಕರಣದ ಮರುತನಿಖೆ ಆಗಬೇಕು ಹಾಗೂ ಅಪರಾಧಿಗಳನ್ನು ಪತ್ತೆ ಹಚ್ಚಿ ಬಂಧಿಸಿಸುವಂತೆ ಆದೇಶವನ್ನು ನೀಡಿತ್ತು. ಹೈಕೋರ್ಟ್ ಆದೇಶವಾಗಿ ಏಳು ವರ್ಷವಾದರೂ ಇನ್ನೂ ಆರೋಪಿಗಳ ಬಂಧನವಾಗಿಲ್ಲ. ತನಿಖೆಯೂ ಆಗುತ್ತಿಲ್ಲ. ಪೊಲೀಸ್ ಇಲಾಖೆಯ ನಡೆ ಅನುಮಾನ ಹುಟ್ಟಿಸಿದೆ ಎಂದು ಆರೋಪಿಸಿದರು.

ಜಿಲ್ಲೆಯಲ್ಲಿ ಇಂತಹ ಕೊಲೆ ನಡೆದ ಐದಾರು ಪ್ರಕರಣಗಳಲ್ಲಿ ಆರೋಪಿ ಪತ್ತೆಯಾಗಿಲ್ಲ. ಡಾ ಚಿತ್ತರಂಜನ್, ತಿಮ್ಮಪ್ಪ ನಾಯ್ಕ , ಪರೇಶ್ ಮೇಸ್ತ ಪ್ರಕರಣಗಳಲ್ಲಿ ಇಂದಿಗೂ ನ್ಯಾಯ ಸಿಗಲಿಲ್ಲ. ತಪ್ಪಿತಸ್ಥರು ನಿಶ್ಚಿಂತೆಯಿಂದ ಇರುವ ವ್ಯವಸ್ಥೆ ಜಿಲ್ಲೆಯಲ್ಲಿ ನಿರ್ಮಾಣವಾದಂತಿದೆ ಎಂದು ಆರೋಪಿಸಿದರು.
ಪತ್ರಿಕಾಗೋಷ್ಠಿ ಬಳಿಕ ನಗರ ಠಾಣೆಯ ಸಿಪಿಐ ಗೋಪಿ ಕೃಷ್ಣ ಅವರಿಗೆ ಶ್ರೀರಾಮ ಸೇನೆ ವತಿಯಿಂದ ಮನವಿ ನೀಡಲಾಯಿತು. ತನಿಖೆ ಚುರುಕುಗೊಳಿಸಿ ತಪ್ಪಿತಸ್ಥರನ್ನು ಶಿಕ್ಷೆಗೆ ಗುರಿಪಡಿಸಬೇಕು ಎಂದು ಆಗ್ರಹಿಸಿದರು.

ಉಪಾಧ್ಯಕ್ಷ ಜಯಂತ ಮಾಯ್ಕ, ಪ್ರಧಾನ ಕಾರ್ಯದರ್ಶಿ ಆನಂದ ಶೆಟ್ಟಿ ಆಡ್ಲಾರ್, ತಾಲೂಕು ಅಧ್ಯಕ್ಷ ರಾಜು ನಾಯ್ಕ, ರಾಮದಾಸ ಉಪಸ್ಥಿತರಿದ್ದರು.