ಜಿಲ್ಲೆ

ಪತ್ರಕರ್ತರ ಭವನ ನಿರ್ಮಾಣಕ್ಕೆ ನೆರವು ನೀಡಲು ಮನವಿ

ಯಳಂದೂರು: ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕಟ್ಟಡ ನಿರ್ಮಾಣಕ್ಕೆ ಅಗತ್ಯ ನೆರವು ನೀಡುವುದಾಗಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಭರವಸೆ ನೀಡಿದರು.

ಪಟ್ಟಣದ ಎಸ್‌ಬಿಎಂ ವೃತ್ತದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಸಚಿವರಿಗೆ ಅಭಿನಂದನೆ ಸಲ್ಲಿಸಿ, ಯಳಂದೂರು ಪಟ್ಟಣದಲ್ಲಿ ನಿವೇಶನ ದೊರೆಯದ ಕಾರಣ ಪತ್ರಕರ್ತರ ಭವನ ನಿರ್ಮಾಣ ಸಾಧ್ಯವಾಗಿಲ್ಲ. ಕ್ಷೇತದ ಶಾಸಕ ಎ.ಆರ್.ಕೃಷ್ಣಮೂರ್ತಿ ಅವರ ನೇತೃತ್ವದಲ್ಲಿ ಪಟ್ಟಣದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ನಿವೇಶನ ಗುರುತಿಸಿದ್ದು, ಕಟ್ಟಡ ನಿರ್ಮಾಣಕ್ಕೆ ಅನುದಾನ ಒದಗಿಸಿಕೊಡಬೇಕು ಎಂದು ಮನವಿ ಸಲ್ಲಿಸಲಾಯಿತು. ಸಚಿವ ಎಚ್.ಸಿ.ಮಹದೇವಪ್ಪ ಮನವಿ ಸ್ವೀಕರಿಸಿ ಕಟ್ಟಡ ನಿರ್ಮಾಣಕ್ಕೆ ಅಗತ್ಯ ನೆರವು ನೀಡುವ ಭರವಸೆ ನೀಡಿದರು.

ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ ಅಂಬಳೆ ವೀರಭದ್ರನಾಯಕ, ಯರಿಯೂರು ನಾಗೇಂದ್ರ, ಫೈರೋಜ್ ಖಾನ್, ಡಿ.ಪಿ.ಮಹೇಶ್, ಭಾನುಪ್ರಕಾಶ್, ನವಾಜ್, ನಾಗರಾಜು, ಮಲ್ಲು, ಗೋವಿಂದರಾಜು, ಮೈಸೂರು ವಿಶ್ವವಿದ್ಯಾಲಯ ಸಿಂಡಿಕೇಟ್ ಮಾಜಿ ಸದಸ್ಯ ಕಿನಕಹಳ್ಳಿ ರಾಚಯ್ಯ ಇತರರು ಇದ್ದರು.