ಕಡಬ: ಕೊಲ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕಾಯಂ ವೈದ್ಯಾಧಿಕಾರಿ ನೇಮಕಗೊಳಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದು ಈ ಬಗ್ಗೆ ಇಲಾಖೆಗೆ ಮನವಿ ಮಾಡಲು ಕೊೈಲ ಗ್ರಾಮಸಭೆಯಲ್ಲಿ ನಿರ್ಣಯಿಸಲಾಗಿದೆ.
ಗ್ರಾಪಂ ಅಧ್ಯಕ್ಷೆ ಪುಷ್ಪಾ ಸುಭಾಶ್ ಶೆಟ್ಟಿ ಅಧ್ಯಕ್ಷತೆಯಲ್ಲಿ ಗ್ರಾಪಂ ಸಭಾಭವನದಲ್ಲಿ ನಡೆಯಿತು. ಮುಖ್ಯ ಪಶುವೈದ್ಯಾಧಿಕಾರಿ ಡಾ.ಅಜಿತ್ ಮಾರ್ಗದರ್ಶಿ ಅಧಿಕಾರಿಯಾಗಿದ್ದರು. ಕೊಲ ಪ್ರಾಥಮಿಕ ಆರೋಗ್ಯ ಕೇಂದ್ರದ ಪ್ರಭಾರ ಆಡಳಿತ ವೈದ್ಯಾಧಿಕಾರಿ ಡಾ.ಶಿಶಿರ ಆರೋಗ್ಯ ಇಲಾಖೆ ಮಾಹಿತಿ ನೀಡುತ್ತಿದ್ದಾಗ ಮಾತನಾಡಿದ ಗ್ರಾಮಸ್ಥೆ ಸೆಲಿಕತ್ 6 ಗ್ರಾಮಗಳಿಗೆ ಸಂಬಂಧಪಟ್ಟ ಆರೋಗ್ಯ ಕೇಂದ್ರದಲ್ಲಿ ಕಾಯಂ ವೈದ್ಯರು ಇಲ್ಲ ಎಂದರು.
ವೈದ್ಯಾಧಿಕಾರಿ ಡಾ.ಶಿಶಿರ ಮಾತನಾಡಿ, ಕೊಲ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಗುತ್ತಿಗೆ ಆಧಾರದ ವೈದ್ಯರ ನೇಮಕ ಆಗಿದೆ. ಆದರೆ ಅವರು ರಜೆ ಪಡೆದು ಉನ್ನತ ವ್ಯಾಸಂಗಕ್ಕೆ ತೆರಳಿದ್ದಾರೆ ಎಂದರು. ಮೋಹನದಾಸ್ ಶೆಟ್ಟಿ ಬಡಿಲ, ಅಬೂಬಕ್ಕರ್ ಸಿದ್ದೀಕ್ ಮುನೀರ್ ಆತೂರು, ಎ.ಕೆ.ಬಶೀರ್ ಆತೂರು ಕಾಯಂ ವೈದ್ಯಾಧಿಕಾರಿ ನೇಮಕಗೊಳಿಸಬೇಕೆಂದು ಒತ್ತಾ ಯಿಸಿದರು. ಈ ಬಗ್ಗೆ ಚರ್ಚೆ ನಡೆದು ಕಾಯಂ ವೈದ್ಯಾಧಿಕಾರಿ ನೇಮಕಗೊಳಿಸುವಂತೆ ಇಲಾಖೆಗೆ ಮನವಿ ಮಾಡಲು ನಿರ್ಣಯ ಕೈಗೊಳ್ಳಲಾಯಿತು.
ಬೂಡಲೂರು ಬೈಲಿನ 9 ಮನೆಯವರಿಗೆ ಹಿರಿಯರ ಕಾಲದಿಂದಲೂ ಕೃಷಿ ಜಮೀನಿಗೆ ಹೋಗಲು ಸರ್ಕಾರಿ ಜಾಗದಲ್ಲಿ ಇದ್ದ ರಸ್ತೆ ಬಂದ್ ಮಾಡಿ ಸರ್ಕಾರಿ ಜಮೀನನ್ನ್ನು ವ್ಯಕ್ತಿಯೋರ್ವರು ಅಕ್ರಮವಾಗಿ ಸ್ವಾಧೀನ ಪಡಿಸಿಕೊಂಡಿದ್ದಾರೆ. ಈ ಬಗ್ಗೆ ದೂರು ನೀಡಲಾಗಿದೆ. ಏನೂ ಕ್ರಮ ಕೈಗೊಂಡಿದ್ದೀರಿ ಎಂದು ಬುಡಲೂರು ನಿವಾಸಿಗಳಾದ ಸುಪ್ರೀತ್ ರೈ, ದಿನೇಶ್ ಬಿ., ಕೃಷ್ಣಪ್ಪ ಗೌಡ, ದಾಮೋದರ ಗೌಡ, ರಾಜೇಶ ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷೆ ಪುಷ್ಪಾ ಸುಭಾಶ್ ಶೆಟ್ಟಿ, ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದೇವೆ. ಈ ವಿವಾದ ನ್ಯಾಯಲಯಲ್ಲಿದೆ. ಇದಕ್ಕೆ ಪ್ರತಿಕ್ರಿಯಿಸಿದ ಸುಪ್ರೀತ್ ರೈ ಹಾಗೂ ಇತರರು ಕೇಸು ಇರುವುದೇ ಬೇರೆ, ರಸ್ತೆ ಬಂದ್ ಮಾಡಿರುವ ವಿಚಾರವೇ ಬೇರೆ ಎಂದರು. ಆದಷ್ಟೂ ಬೇಗ ರಸ್ತೆ ಬಂದ್ ಮಾಡಿರುವುದನ್ನು ತೆರವುಗೊಳಿಸಿಕೊಡಬೇಕೆಂದು ಒತ್ತಾಯಿಸಿದರು.
ಎಲ್ಯಂಗ ಎಂಬಲ್ಲಿ ಹೊಸ ಅಂಗನವಾಡಿ ಕೇಂದ್ರ ಆರಂಭಿಸಬೇಕೆಂದು ಮುನೀರ್ ಆತೂರು ಒತ್ತಾಯಿಸಿದರು. ಕಾಯಂ ಗ್ರಾಮ ಆಡಳಿತಾಧಿಕಾರಿ ನೇಮಕಕ್ಕೆ ಗ್ರಾಮಸ್ಥರು ಒತ್ತಾಯಿಸಿದರು.
ಇದಕ್ಕೆ ಝುನೈದ್ ಕೆಮ್ಮಾರ, ಗ್ರಾಪಂ ಉಪಾಧ್ಯಕ್ಷ ಯತೀಶ್ ಕುಮಾರ್ ಎಚ್., ಸದಸ್ಯರಾದ ಹರ್ಷಿತ್‌ಕುಮಾರ್, ನೀತಾ ಎನ್., ಸಫಿಯಾ, ಹಸನ್ ಸಜ್ಜಾದ್, ಜೊಹರಾಬಿ, ನಝೀರ್ ಪೂರಿಂಗ, ಕಮಲಾಕ್ಷಿ, ಸೀತಾರಾಮ ಬಲ್ತಕುಮೇರು, ಲತಾ, ಭಾರತಿ, ಶಶಿಕಲಾ ಎಂ., ಚಿದಾನಂದ ಪಿ., ಚಂದ್ರಶೇಖರ ಮಾಳ ಇದ್ದರು. ಪಿಡಿಒ ಸಂದೇಶ್ ಸ್ವಾಗತಿಸಿ, ವರದಿ ಮಂಡಿಸಿದರು. ಕಾರ್ಯದರ್ಶಿ ಪಮ್ಮು ವಂದಿಸಿದರು. ಸಿಬ್ಬಂದಿ ಸಹಕರಿಸಿದರು.
ರಾಮಕುಂಜ ಸರ್ಕಾರಿ ಹಿ.ಪ್ರಾ.ಶಾಲೆಯ ಕಟ್ಟಡದ ಛಾವಣಿ ಸೋರುತ್ತಿದ್ದು ಇಲ್ಲಿಗೆ ಹೊಸ ಕಟ್ಟಡ ನೀಡಬೇಕೆಂದು ಮುನೀರ್ ಆತೂರು ಒತ್ತಾಯಿಸಿದರು. ಶಾಲೆ ಆವರಣ, ಕೆ.ಸಿ.ಫಾರ್ಮ್ ಜಾಗದಲ್ಲಿ ಬೈಕ್‌ನಲ್ಲಿ ಬಂದು ಫೋಟೋ, ವಿಡಿಯೋ ಮಾಡುವವರಿಗೆ ಕಡಿವಾಣ ಹಾಕಬೇಕೆಂದು ವಿನೋದ್ ಪಲ್ಲಡ್ಕ ಒತ್ತಾಯಿಸಿದರು. ಬೆಳಗ್ಗೆ ಹಾಗೂ ಸಂಜೆ ಉಪ್ಪಿನಂಗಡಿ-ಕಡಬ ಮಧ್ಯೆ ಹೆಚ್ಚುವರಿ ಕೆಸ್ಸಾರ್ಟಿಸಿ ಬಸ್ಸು ಓಡಾಟ ಮಾಡಬೇಕೆಂದು ಝುನೈದ್ ಕೆಮ್ಮಾರ ಒತ್ತಾಯಿಸಿದರು. ಆತೂರಿನಲ್ಲಿ ಬಿಸ್ಸೆನ್ನೆಲ್ ಕಚೇರಿ ಮುಂದೆ, ರಾಮಕುಂಜ ಗ್ರಾಪಂನ ಮುಂಭಾಗದಲ್ಲಿದ್ದ ಅಪಾಯಕಾರಿ ಮರ ತೆರವುಗೊಳಿಸಿದ್ದರೂ ಮರದ ತುಂಡು ಈಗಲೂ ಅಲ್ಲಿ ಹೆದ್ದಾರಿ ಬದಿಯಲ್ಲಿಯೇ ಇದ್ದು, ಅಪಘಾತ ಆಗುವ ಸಾಧ್ಯತೆಯೂ ಇದೆ ಎಂದು ಅಶೋಕ್ ಕೊಲ, ಮುನೀರ್ ಆತೂರು ಅರಣ್ಯ ಇಲಾಖೆ ಅಧಿಕಾರಿಗಳ ಗಮನ ಸೆಳೆದರು.