ತರೀಕೆರೆ: ಎಂ.ಸಿ.ಹಳ್ಳಿ ಗ್ರಾಮದಲ್ಲಿ ನಿಗದಿತ ಸಮಯದಲ್ಲಿ ಗ್ರಾಮೀಣ ಸಾರಿಗೆ ಬಸ್ ಸಂಚರಿಸದೆ ವಿದ್ಯಾರ್ಥಿಗಳು ಸೇರಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು, ಶಿವಮೊಗ್ಗ, ಕಡೂರು ಇನ್ನಿತರೆ ಡಿಪೋಗಳಿಂದ ಹೊರಡುವ ಎಕ್ಸ್‌ಪ್ರೆಸ್ ಬಸ್‌ಗಳು ನಿಲುಗಡೆಯಾಗದ ಹೊರತು ಸಮಸ್ಯೆ ಬಗೆಹರಿಯುವುದಿಲ್ಲ ಎಂದು ಗ್ರಾಪಂ ಅಧ್ಯಕ್ಷ ಎನ್.ರಾಮೇಗೌಡ ಹೇಳಿದರು.
ತಾಲೂಕಿನ ಎಂ.ಸಿ.ಹಳ್ಳಿ ಗ್ರಾಪಂ ಆವರಣದಲ್ಲಿ ಜಿಪಂ ಹಾಗೂ ತಾಪಂ ಸಹಯೋಗದಲ್ಲಿ ಏರ್ಪಡಿಸಿದ್ದ ಗ್ರಾಮ ಸ್ಪಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸದ್ಯದಲ್ಲೇ ಕೆಎಸ್‌ಆರ್‌ಟಿಸಿ ನಿಗಮದ ಅಧ್ಯಕ್ಷರನ್ನು ಭೇಟಿ ಮಾಡಿ ನಿಗದಿತ ಸಮಯದಲ್ಲಿ ಗ್ರಾಮೀಣ ಸಾರಿಗೆ ಸಂಚರಿಸುವಂತೆ ಹಾಗೂ ಶಿವಮೊಗ್ಗ, ಕಡೂರು, ಚಿಕ್ಕಮಗಳೂರು ಡಿಪೋಗಳಿಂದ ಹೊರಡುವ ಎಲ್ಲ ಬಸ್‌ಗಳು ಎಂಸಿ ಹಳ್ಳಿಯಲ್ಲಿ ಕೋರಿಕೆ ನಿಲುಗಡೆ ಮಾಡುವಂತೆ ಮನವಿ ಸಲ್ಲಿಸಲಾಗುವುದು ಎಂದರು.
ಗಂಟೆಕಣಿವೆ ಗ್ರಾಮದಲ್ಲಿ ಹಲವು ಸಮಸ್ಯೆಗಳಿಂದ 190ಕ್ಕೂ ಹೆಚ್ಚು ನಿವಾಸಿಗಳಿಗೆ ಹಕ್ಕುಪತ್ರ ಸಿಕ್ಕಿಲ್ಲ. ಶೀಘ್ರದಲ್ಲೇ ನಿಯಮಬದ್ಧವಾಗಿ ಬಡಾವಣೆ ನಿರ್ಮಿಸಿ ಎಲ್ಲರಿಗೂ ಹಕ್ಕುಪತ್ರ ಕೊಡಿಸಿಕೊಡುವ ವ್ಯವಸ್ಥೆ ಮಾಡಲಾಗುವುದು. ಅಲ್ಲಿಯವರೆಗೆ ಗಂಟೆಕಣಿವೆ ಗ್ರಾಮ ನಿವಾಸಿಗಳು ತಾಳ್ಮೆ ವಹಿಸಬೇಕು ಎಂದು ಹೇಳಿದರು.
ಗ್ರಾಮ ಸ್ಪಂದನಾ ಕಾರ್ಯಕ್ರಮದಲ್ಲಿ ಕೆಎಸ್‌ಆರ್‌ಟಿಸಿ, ಗ್ರಾ.ಪಂ ಹಾಗೂ ಕಂದಾಯ ಇಲಾಖೆಗೆ ಸೇರಿದ ಸಮಸ್ಯೆ ಕುರಿತಾದ 18 ಅರ್ಜಿಗಳು ಸಲ್ಲಿಕೆಯಾದವು. ಗ್ರಾಪಂ ಸದಸ್ಯರಾದ ಎಚ್.ಟಿ.ಪ್ರದೀಪ್, ರಾಜು, ಜ್ಯೋತಿ, ಶೋಭಾ, ರೇಣುಕಮ್ಮ, ಪ್ರೇಮಲತಾ, ಪಿಎಚ್‌ಸಿ ವೈದ್ಯಾಧಿಕಾರಿ ಡಾ.ಜಗದೀಶ್, ಪಿಆರ್‌ಡಿ ಎಇಇ ದಯಾಶಂಕರ್, ಕೃಷಿ ಅಧಿಕಾರಿ ರಘುಕುಮಾರ್, ಪಿಡಿಒಗಳಾದ ಸಿ.ರವಿನಾಯ್ಕ, ಎಲ್.ಆರ್.ಈಶ್ವರಯ್ಯ ಮತ್ತಿತರರಿದ್ದರು.