ಮದ್ದೂರು: ಸಂವಿಧಾನ ದೇಶದ ಪ್ರತಿಯೊಬ್ಬರನ್ನು ಸಶಕ್ತಗೊಳಿಸುವುದರ ಜತೆಗೆ ಸರ್ವರಿಗೂ ಸಮಾನತೆಯನ್ನು ಒದಗಿಸಿದೆ ಎಂದು ಶಾಸಕ ಕೆ.ಎಂ.ಉದಯ್ ಹೇಳಿದರು.
ಪಟ್ಟಣದ ಶಿವಪುರ ದ್ವಜ ಸತ್ಯಾಗ್ರಹಸೌಧದಲ್ಲಿ ಎಚ್.ಕೆ.ವೀರಣ್ಣಗೌಡ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಘಟಕ ಆಯೋಜಿಸಿದ್ದ 75ನೇ ವರ್ಷದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಪ್ರತಿಯೊಬ್ಬರಿಗೂ ಹಕ್ಕು ಮತ್ತು ಕರ್ತವ್ಯಗಳನ್ನು ನೀಡಿರುವ ಸಂವಿಧಾನವು ನಮಗೆ ಬಹುದೊಡ್ಡ ಶಕ್ತಿಯಾಗಿದ್ದು, ಸಮಾಜದ ಎಲ್ಲರನ್ನೂ ರಕ್ಷಿಸುತ್ತಿದೆ ಎಂದು ಅವರು ಹೇಳಿದರು.
ಭಾರತ ಗಣರಾಜ್ಯೋತ್ಸವವು ನಮ್ಮ ಸ್ವಾತಂತ್ರ್ಯ ಹೋರಾಟಗಾರರ ಮತ್ತು ಅವರ ತ್ಯಾಗಕ್ಕೆ ಸಾಕ್ಷಿಯಾಗಿದೆ. ಮಾತ್ರವಲ್ಲದೆ ಏಕತೆ ಮತ್ತು ಶಾಂತಿಯಿಂದ ಬದುಕಲು ಕಲಿಸುತ್ತದೆ. ಆದ್ದರಿಂದ ಸಂವಿಧಾನದ ಆಸೆಯದಂತೆ ಎಲ್ಲರೂ ಕರ್ತವ್ಯ ನಿರ್ವಹಿಸಿ ಭಾರತದ ಸಾರ್ವಭೌಮತೆಯನ್ನು ಕಾಪಾಡಿಕೊಂಡು ಹೋಗಬೇಕೆಂದು ಅವರು ಕಿವಿಮಾತು ಹೇಳಿದರು.
ಶಿವಪುರದ ಧ್ವಜ ಸತ್ಯಾಗ್ರಹದ ಅಭಿವೃದ್ಧಿಗೆ ಈಗಾಗಲೇ ಸಮಿತಿಯನ್ನ ರಚಿಸಿದ್ದು, ಅನುದಾನ ಇಟ್ಟುಕೊಳ್ಳಲಾಗಿದೆ. ಧ್ವಜ ಸತ್ಯಾಗ್ರಹಸೌಧ ತಾಲೂಕಿಗೆ ಹೆಮ್ಮೆಯ ಸ್ಮಾರಕವಾಗಿದ್ದು, ಮುಂದಿನ ದಿನಗಳಲ್ಲಿ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಿ ಸ್ವಾತಂತ್ರ್ಯ ಹೋರಾಟಗಾರರ ಮಾಹಿತಿಯನ್ನು ವಿದ್ಯಾರ್ಥಿಗಳು ತಿಳಿದುಕೊಳ್ಳುವಂತಹ ಕೇಂದ್ರವನ್ನಾಗಿ ರೂಪಿಸಲಾಗುವುದು ಎಂದು ಅವರು ಹೇಳಿದರು.
ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಕೆ.ಟಿ.ಚಂದು, ತಹಸೀಲ್ದಾರ್ ಕೆ.ಎಸ್.ಸೋಮಶೇಖರ್, ಎಂ.ಎಚ್.ಚನ್ನೇಗೌಡ ವಿದ್ಯಾಸಂಸ್ಥೆಯ ಅಧ್ಯಕ್ಷ ಎಂ.ಸ್ವರೂಪ್ ಚಂದ್, ಕಾರ್ಯದರ್ಶಿ ಸಿ.ಅಪೂರ್ವ ಚಂದ್ರು , ನಿರ್ದೇಶಕರಾದ ಎಂ.ಎ.ಮಲ್ಲಿಕಾರ್ಜುನ್, ರಾಮಲಿಂಗಯ್ಯ, ಇನ್ನರ್ ವೀಲ್ ಸಂಸ್ಥೆಯ ಅಧ್ಯಕ್ಷೆ ಕಲಾವತಿ, ನಾಡಪ್ರಭು ಕೆಂಪೇಗೌಡ ಒಕ್ಕಲಿಗರ ಸಂಘದ ಅಧ್ಯಕ್ಷ ಡಿ.ಪಿ.ಸ್ವಾಮಿ, ಚುಂಚಶ್ರೀ ಒಕ್ಕಲಿಗರ ವೇದಿಕೆ ಅಧ್ಯಕ್ಷ ಬಿ.ಕೃಷ್ಣಪ್ಪ, ಪ್ರಾಂಶುಪಾಲರಾದ ಜಿ.ಎಸ್ .ಶಂಕರೇಗೌಡ, ಯು.ಎಸ್.ಶಿವಕುಮಾರ್, ಉಪಪ್ರಾಂಶುಪಾಲರಾದ ಪ್ರಕಾಶ್, ನಂದಿನಿ, ಮುಖ್ಯ ಶಿಕ್ಷಕರಾದ ಎನ್.ಕೃಷ್ಣ, ಚಂದ್ರಶೇಖರ್, ಅನಿತಾ, ಕೆ.ಎಸ್.ವರದರಾಜು, ಆಡಳಿತಾಧಿಕಾರಿ ಯು.ಎಸ್.ರವಿ, ರಾಷ್ಟ್ರೀಯ ಸೇವಾ ಯೋಜನೆ ಅಧಿಕಾರಿಗಳಾದ ಎಚ್.ಎಸ್.ಪಂಚಲಿಂಗೇಗೌಡ, ಎ.ವಿ.ಪ್ರದೀಪ್ ಇತರರಿದ್ದರು.