ಜಿಲ್ಲೆ

ಜಿಲ್ಲಾ ಸಶಸ್ತ್ರ ಮೀಸಲು ಕವಾಯತು ಮೈದಾನದಲ್ಲಿ ಗಣರಾಜ್ಯೋತ್ಸವ ಆಚರಣೆ: ಡಿಸಿ ಡಾ.ಕುಮಾರ ಮಾಹಿತಿ

ಮಂಡ್ಯ: ಜಿಲ್ಲಾಡಳಿತದ ವತಿಯಿಂದ ಜ.26ರಂದು ಜಿಲ್ಲಾ ಸಶಸ್ತ್ರ ಮೀಸಲು ಕವಾಯತು ಮೈದಾನದಲ್ಲಿ ಗಣರಾಜ್ಯೋತ್ಸವ ದಿನಾಚರಣೆ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಂದು ಬೆಳಗ್ಗೆ 9 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಧ್ವಜಾರೋಹಣ ನೆರವೇರಿಸಿ ಗಣರಾಜ್ಯೋತ್ಸವದ ಸಂದೇಶ ನೀಡಲಿದ್ದಾರೆ ಎಂದರು.

ಗಣರಾಜ್ಯೋತ್ಸವ ಸಂಬಂಧ ರಚಿಸಿರುವ ಸ್ವಾಗತ ಸಮಿತಿ, ವೇದಿಕೆ, ಪರೇಡ್, ಸಾಂಸ್ಕೃತಿಕ ಹಾಗೂ ಮೆರವಣಿಗೆ ಸಮಿತಿ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು. ಜತೆಗೆ ಶಿಷ್ಟಾಚಾರದಂತೆ ಎಲ್ಲ ಜನಪ್ರತಿನಿಧಿಗಳಿಗೆ ಆಹ್ವಾನ ಪತ್ರಿಕೆ ತಲುಪಿಸಿ. ವೇದಿಕೆಯ ಸಿದ್ಧತೆ, ಆಸನ, ಧ್ವನಿವರ್ಧಕ, ಕುಡಿಯುವ ನೀರು ಮತ್ತಿತರ ಮೂಲ ಸೌಕರ್ಯವನ್ನು ಒದಗಿಸಲು ಸಂಬಂಧಿಸಿದ ಸಮಿತಿಯಿಂದ ವ್ಯವಸ್ಥೆ ಮಾಡಿಕೊಳ್ಳಬೇಕು. ಸರ್ಕಾರಿ ಕಚೇರಿಗಳನ್ನು ದೀಪಾಲಂಕಾರಗೊಳಿಸಿ. ಸಾಂಸ್ಕೃತಿಕ ಕಾರ್ಯಕ್ರಮ ನಿಗದಿಗೊಳಿಸಿದ ಸಮಯದಂತೆ ನಡೆಯಬೇಕು. ಪೊಲೀಸ್, ಎನ್‌ಸಿಸಿ, ಗಹರಕ್ಷಕ ದಳದ ಪಥಸಂಚಲನ, ಶಾಲಾ ಕಾಲೇಜು ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಅದ್ಧೂರಿಯಾಗಿ ನಡೆಯಲಿದೆ ಎಂದರು.

ಸಭೆಯಲ್ಲಿ ಜಿಪಂ ಸಿಇಒ ಶೇಖ್ ತನ್ವೀರ್ ಆಸಿಫ್, ಅಪರ ಪೊಲೀಸ್ ವರಿಷ್ಠಾಧಿಕಾರಿ-2 ಎಸ್.ಇ.ಗಂಗಾಧರಸ್ವಾಮಿ, ಸಮಾಜಕಲ್ಯಾಣ ಇಲಾಖೆ ಉಪನಿರ್ದೇಶಕ ಸಿದ್ದಲಿಂಗೇಶ್, ತಹಸೀಲ್ದಾರ್ ಡಾ.ಶಿವಕುಮಾರ್ ಬಿರಾದರ್, ಪೌರಾಯುಕ್ತ ಆರ್.ಮಂಜುನಾಥ್, ಜಿಲ್ಲಾ ವಾರ್ತಾಧಿಕಾರಿ ಎಸ್.ಎಚ್.ನಿರ್ಮಲಾ ಇತರರಿದ್ದರು.