ಜಿಲ್ಲೆ

ಗಣರಾಜ್ಯೋತ್ಸವ: ಅರ್ಥಪೂರ್ಣ ಆಚರಣೆಗೆ ತೀರ್ಮಾನ

ಮಡಿಕೇರಿ: ಜ೨೬ ರಂದು ನಡೆಯುವ ಗಣರಾಜ್ಯೋತ್ಸವ ದಿನಾಚರಣೆಯನ್ನು ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಅರ್ಥಪೂರ್ಣವಾಗಿ ಆಯೋಜಿಸಲು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶರವರ ಅಧ್ಯಕ್ಷತೆಯಲ್ಲಿ ಸೋಮವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಯಿತು.


ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಬಿ.ಸಿ.ಸತೀಶ, ಗಣರಾಜ್ಯೋತ್ಸವ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸುವ ನಿಟ್ಟಿನಲ್ಲಿ ಈಗಾಗಲೇ ಸ್ವಾಗತ, ಧ್ವಜಾರೋಹಣ ಮತ್ತು ವೇದಿಕೆ, ಸಾಂಸ್ಕೃತಿಕ, ಕವಾಯತು, ಉಪಾಹಾರ, ಭಾಷಣ, ಸ್ವಚ್ಛತೆ ಮತ್ತು ಕುಡಿಯುವ ನೀರಿನ ಪೂರೈಕೆ ಹೀಗೆ ವಿವಿಧ ಸಮಿತಿಗಳನ್ನು ರಚಿಸಲಾಗಿದೆ. ತಮಗೆ ವಹಿಸಿರುವ ಜವಾಬ್ದಾರಿಯನ್ನು ವ್ಯವಸ್ಥಿತವಾಗಿ ನಿರ್ವಹಿಸುವಂತೆ ಸೂಚಿಸಿದರು.


ಸಾಂಸ್ಕೃತಿಕ ಕಾರ್ಯಕ್ರಮ ಸಂಬಂಧಿಸಿದಂತೆ ಐದು ತಂಡಗಳಿಗೆ ಅವಕಾಶ ಮಾಡಬೇಕು. ಗಣರಾಜ್ಯೋತ್ಸವ ದಿನದಂದು ವಿದ್ಯಾರ್ಥಿಗಳಿಗೆ ಉಪಾಹಾರ ಕಲ್ಪಿಸಬೇಕು. ಗಣರಾಜ್ಯೋತ್ಸವ ದಿನಾಚರಣೆ ಹಿನ್ನೆಲೆ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಪ್ರತಿಮೆ, ರಾಷ್ಟ್ರಕವಿ ಕುವೆಂಪು, ಫೀಲ್ಡ್ ಮಾರ್ಷಲ್ ಕಾರ್ಯಪ್ಪ, ಜನರಲ್ ತಿಮ್ಮಯ್ಯ, ಗುಡ್ಡೆಮನೆ ಅಪ್ಪಯ್ಯಗೌಡ, ಮಂಗೇರಿರ ಮುತ್ತಣ್ಣ, ಸ್ಕ್ವಾಡರ್ನ್ ಲೀಡರ್ ಅಜ್ಜಮಾಡ ದೇವಯ್ಯರವರ ಪ್ರತಿಮೆಗಳನ್ನು ಶುಚಿಗೊಳಿಸಿ, ದೀಪಾಲಂಕಾರ ಮಾಡುವಂತೆ ನಗರಸಭಾ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ತಿಳಿಸಿದರು.


ಕ್ರೀಡಾಂಗಣ ಸ್ವಚ್ಚತೆ ಹಾಗೂ ಕುಡಿಯುವ ನೀರು ಪೂರೈಕೆ ಸಂಬಂಧಿಸಿದಂತೆ, ಕ್ರೀಡಾಂಗಣದಲ್ಲಿ ಕಾರ್ಯ ಕೈಗೊಳ್ಳಬೇಕು. ಪೂರ್ವಾಭ್ಯಾಸ ಹಾಗೂ ಗಣರಾಜ್ಯೋತ್ಸವ ದಿನದಂದು ಕುಡಿಯುವ ನೀರು ಒದಗಿಸಬೇಕು. ಗಣರಾಜ್ಯೋತ್ಸವ ದಿನದಂದು ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಗಳು ಕಡ್ಡಾಯವಾಗಿ ಹಾಜರಾಗಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.


ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ಮುನೀರ್ ಅಹಮ್ಮದ್ ಅವರು, ರಾಷ್ಟ್ರೀಯ ಹಬ್ಬಗಳಂದು ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸುವಂತಾಗಬೇಕು ಎಂದು ಕೋರಿದರು.


ಹೆಚ್ಚುವರಿ ಜಿಲಾಧಿಕಾರಿ ಡಾ.ನಂಜುಂಡೇಗೌಡ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಸದಾಶಿವ ಪಲ್ಲೇದ್, ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಉಪ ನಿರ್ದೇಶಕ ಸಿ.ರಂಗಧಾಮಯ್ಯ, ಕಾರ್ಮಿಕ ಇಲಾಖಾ ಅಧಿಕಾರಿ ಅನಿಲ್ ಬಗಟಿ, ಸ್ಕೌಟ್ಸ್ ಮತ್ತು ಗೈಡ್ಸ್, ಜಿಲ್ಲಾ ಸಂಘಟಕ ದಮಯಂತಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಯಾಪ್ಟನ್ ಎಂ.ಎ.ಅಯ್ಯಪ್ಪ, ಜಿ.ಪಂ.ಸಿಇಒ ಡಾ.ಎಸ್.ಆಕಾಶ್, ಉಪ ವಿಭಾಗಾಧಿಕಾರಿ ಯತೀಶ್ ಉಳ್ಳಾಲ್, ಹಲವು ಇಲಾಖೆಗಳ ಅಧಿಕಾರಿಗಳು ಇದ್ದರು.