ಜಿಲ್ಲೆ

ಆಕರ್ಷಕ ನೃತ್ಯ, ಪಥ ಸಂಚಲನ: ನಗರದಲ್ಲಿ ಗಣರಾಜ್ಯೋತ್ಸವದ ಸಂಭ್ರಮ

ಕೆ.ಎನ್.ರಾಘವೇಂದ್ರ

ಮಂಡ್ಯ: ನಗರದ ಡಿಎಆರ್ ಪರೇಡ್ ಮೈದಾನದಲ್ಲಿ ಶುಕ್ರವಾರ ಗಣರಾಜ್ಯೋತ್ಸವದ ಅಂಗವಾಗಿ ಆಕರ್ಷಕ ನೃತ್ಯ ಹಾಗೂ ಪಥ ಸಂಚಲನ ಆಯೋಜಿಸಲಾಗಿತ್ತು.

ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಪಥಸಂಚಲನ ತಂಡಗಳ ಪ್ರಧಾನ ದಂಡನಾಯಕ ಆರ್‌ಪಿಐ ಜಗದೀಶ್ ಅವರ ರಕ್ಷಣೆಯಲ್ಲಿ ತೆರೆದ ಜೀಪಿನಲ್ಲಿ ತೆರಳಿ ಗೌರವವಂದನೆ ಸ್ವೀಕರಿಸಿದರು. ಬಳಿಕ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಎನ್‌ಸಿಸಿ ಕೆಡೆಟ್‌ಗಳು, ಸ್ಕೌಟ್ಸ್ ಆ್ಯಂಡ್ ಗೈಡ್ಸ್, ಪೊಲೀಸರು, ಗೃಹರಕ್ಷಕ ದಳ ಸಿಬ್ಬಂದಿ ಸೇರಿದಂತೆ 24 ತುಕಡಿ ಆಕರ್ಷಕ ಪಥಸಂಚಲನ ನಡೆಸಿ ಗೌರವವಂದನೆ ಸಲ್ಲಿಸಿದವು.

ಬೆನ್ನಲ್ಲೇ ಸಚಿವರು ಗಣರಾಜ್ಯೋತ್ಸವ ಸಂದೇಶ ನೀಡಿದರು. ನಂತರ ವಿದ್ಯಾರ್ಥಿಗಳ ಸಾಮೂಹಿಕ ನೃತ್ಯ ಪ್ರದರ್ಶನವು ಹೆಚ್ಚು ಗಮನ ಸೆಳೆಯಿತು. ನಗರದ ಗುತ್ತಲು ಬಡಾವಣೆಯ ವಿಮಲಾ ಹಿರಿಯ ಪ್ರಾಥಮಿಕ ಶಾಲೆಯ 250ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾರತಾಂಬೆ ಇಂದು ನಿನ್ನ ಜನುಮ ದಿನ ಸೇರಿದಂತೆ ದೇಶಭಕ್ತಿ ಗೀತೆಗಳಿಗೆ ಸಾಮೂಹಿಕ ನತ್ಯ ಪ್ರದರ್ಶಿಸಿದರು. ಬಟ್ಟೆಯ ಪರದೆಯಲ್ಲಿ ವಿದ್ಯಾರ್ಥಿಗಳು ತಮ್ಮ ಕೈಗಳಿಂದ ಜೈಹಿಂದ್ ಕಲಾಕೃತಿ ರಚಿಸಿ ಗಮನ ಸೆಳೆದರು.

ಬಳಿಕ ಚೈತನ್ಯ ಟೆಕ್ನೋ ಸ್ಕೂಲ್‌ನ ನೂರಾರು ವಿದ್ಯಾರ್ಥಿಗಳು ಕೇಸರಿ, ಬಿಳಿ, ಹಸಿರು ಬಣ್ಣದ ಬಟ್ಟೆಗಳನ್ನು ಧರಿಸಿ ಕ್ರೀಡಾಂಗಣದಲ್ಲಿ ದೇಶಭಕ್ತಿ ಮೇಳೈಸುವಂತೆ ಮಾಡಿದರು. ಜಗ್ಗದು ಜಗ್ಗದು ಯಾರಿಗೆ ಜಗ್ಗದು... ಇಂಡಿಯಾ ನಮ್ ಇಂಡಿಯಾ... ಹಾಡುಗಳಿಗೆ ಹೆಜ್ಜೆ ಹಾಕಿದರು. ಸೈಕಲ್ ಹಾಗೂ ಲೆಜಿಮ್ಸ್ ಬಳಿಸಿ ವಿದ್ಯಾರ್ಥಿಗಳು ಪ್ರದರ್ಶಿಸಿದ ನೃತ್ಯವು ನೋಡುಗರನ್ನು ಸೂಚಿಗಲ್ಲಿನಂತೆ ಸೆಳೆಯಿತು. ನಂತರ ಮಂಡ್ಯದ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ವಿದ್ಯಾರ್ಥಿಗಳು ವಂದೇ ಮಾತರಂ, ಮಾ ತುಜೇ ಸಲಾಂ, ಜಗ್ಗದು ಜಗ್ಗದು ಯಾರಿಗೂ ಜಗ್ಗದು ಇಂಡಿಯಾ ನಮ್ಮ ಇಂಡಿಯಾ ಹಾಡುಗಳಿಗೆ ಹಾಗೂ ಅಚೀವರ್ಸ್ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ದಿಲ್ ಶೇ ರೇ, ರಂಗ್ ತೇರಿ ಜೀತ್ ಕಾ... ಹಾಡುಗಳಿಗೆ ನೃತ್ಯರೂಪಕ ಪ್ರದರ್ಶಿಸಿ ನೆರೆದಿದ್ದವರನ್ನು ಆಕರ್ಷಿಸಿತು.