ರಾಯಚೂರು: ಎಲ್ಲರೂ ಕೈಜೋಡಿಸಿದಾಗ ಮಾತ್ರ ಸುಭದ್ರ ದೇಶ ಕಟ್ಟಲು ಸಾಧ್ಯ ಎಂಬುದನ್ನು ಮಕ್ಕಳಿಗೆ ಶಿಕ್ಷಕರು ತಿಳಿಸುವ ಮೂಲಕ ದೇಶಭಕ್ತಿ ಮೂಡಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಹೇಳಿದರು.
ನಗರದ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ ಆಯೋಜಿಸಿದ್ದ 76ನೇ ಗಣರಾಜ್ಯೊತ್ಸವದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ದೇಶದಲ್ಲಿ ಎಲ್ಲರಿಗೂ ಸಮಾನತೆ ಇದೆ ಎನ್ನುವ ವಿಷಯದ ಬಗ್ಗೆ ಮಕ್ಕಳು, ಮುಂದಿನ ಪೀಳಿಗೆಗೆ ಮನವರಿಕೆ ಮಾಡುತ್ತಿರುವುದರಿಂದ ನಾವಿಂದು ಶಾಂತಿ-ಸಹಬಾಳ್ವೆಯಿಂದಿರಲು ಸಾಧ್ಯವಾಗಿದೆ ಎಂದರು.
ಭಾರತ ಸತ್ಯ-ಅಹಿಂಸೆ ಮಾರ್ಗದಲ್ಲಿ ಸ್ವಾತಂತ್ರ್ಯ ಪಡೆಯಿತು. ನಂತರ ನಮ್ಮ ಸ್ವಾತಂತ್ರ್ಯ ಮತ್ತು ಭ್ರಾತೃತ್ವ ಗಟ್ಟಿಯಾಗಿರಲು ಡಾ.ಅಂಬೇಡ್ಕರ್ ಅವರು ಜನರಿಂದ ಜನರಿಗಾಗಿ ಜನರಿಗೋಸ್ಕರ ಎನ್ನುವ ಆಶಯದೊಂದಿಗೆ ಸಂವಿಧಾನ ರಚಿಸಿದರು. ಪ್ರಜಾಪ್ರಭುತ್ವದ ನೆಲೆಗಟ್ಟಿನಲ್ಲಿ ಸಂವಿಧಾನ ಎಂಬ ದೀಪದ ಬೆಳಕಿನಲ್ಲಿ ದೇಶವು ಮುನ್ನೆಡೆಯುತ್ತಿದೆ. ಸಂವಿಧಾನ ಸರ್ವರಿಗೂ ಸಮಾನ ಅವಕಾಶಗಳನ್ನು ಕಲ್ಪಿಸಿದೆ. ಅವುಗಳನ್ನು ಎಲ್ಲರಿಗೂ ಸಮರ್ಪಕವಾಗಿ ದೊರೆಯುವಂತೆ ಮಾಡುವಲ್ಲಿ ಎಲ್ಲ ಅಧಿಕಾರಿ ಮತ್ತು ಸಿಬ್ಬಂದಿ ವರ್ಗ ಎಚ್ಚರಿಕೆಯಿಂದ ಕೆಲಸ ಮಾಡಬೇಕಿದೆ ಎಂದು ತಿಳಿಸಿದರು.
ಕಲಂ 371ಜೆ ಜಾರಿಯಿಂದಾಗಿ ರಾಯಚೂರು ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಿಗೆ ಹೆಚ್ಚಿನ ಅನುದಾನ ದೊರೆತು ಅಭಿವೃದ್ಧಿ ಮಾಡಲು ಸಾಧ್ಯವಾಗಿದೆ. ರಾಜೀವಗಾಂಧಿ ಸೂಪರ್ ಸ್ಪೆಷಾಲಿಟಿ (ಒಪೆಕ್) ಆಸ್ಪತ್ರೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆ ನೀಡಲು ಡೇ ಕೇರ್ ಕಿಮೋಥೆರೆಪಿ ಸೆಂಟರನ್ನು ಆರಂಭಿಸಲಾಗುವುದು ಎಂದು ತಿಳಿಸಿದರು.
ಗಮನ ಸೆಳೆದ ನೃತ್ಯ: ಜಿಲ್ಲಾ ಕ್ರೀಡಾಂಗಣದಲ್ಲಿ 76ನೇ ಗಣರಾಜ್ಯೋತ್ಸವದ ಅಂಗವಾಗಿ ವಿವಿಧ ಶಾಲೆಗಳ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹೊಸ ಬಟ್ಟೆ ಧರಿಸಿ ದೇಶ ಭಕ್ತಿ ಗೀತೆಗಳಿಗೆ ನೃತ್ಯ ಪ್ರದರ್ಶನ ನೀಡುವ ಮೂಲಕ ಗಮನ ಸೆಳೆದರು. ಪೊಲೀಸರು ಆಕರ್ಷಕ ಪಥ ಸಂಚಲನ ರೋಮಾಂಚನ ಮೂಡಿಸಿತು.
ಗ್ರಾಮೀಣ ಶಾಸಕ ಬಸನಗೌಡ ದದ್ದಲ್, ಮಹಾನಗರ ಪಾಲಿಕೆ ಅಧ್ಯಕ್ಷೆ ನರಸಮ್ಮ ಮಾಡಗಿರಿ, ಜಿಲ್ಲಾಧಿಕಾರಿ ನಿತೀಶ ಕೆ., ಜಿಪಂ ಸಿಇಒ ರಾಹುಲ್ ತುಕಾರಾಂ ಪಾಂಡ್ವೆ, ಎಸ್ಪಿ ಎಂ.ಪುಟ್ಟಮಾದಯ್ಯ, ಎಡಿಸಿ ಶಿವಾನಂದ, ತಹಸೀಲ್ದಾರ್ ಸುರೇಶ ವರ್ಮಾ ಇತರರಿದ್ದರು.