ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ
ಹೈನುಗಾರಿಕೆ ಉತ್ತೇಜಿಸುವುದರೊಂದಿಗೆ ಹೈನುಗಾರರ ಆದಾಯ ಹೆಚ್ಚಳಕ್ಕೆ ಮಾರ್ಗೋಪಾಯ ಕಂಡುಕೊಂಡು ಪೂರಕ ವರದಿ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ರಾಷ್ಟ್ರೀಯ ಹೈನು ಅಭಿವೃದ್ಧಿ ನಿಗಮ ವ್ಯವಸ್ಥಾಪಕಿ ಕೃತಿಕಾ ಹೇಳಿದರು.
ಕಾಪು ಉಳಿಯಾರಗೋಳಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಗುರುವಾರ ಭೇಟಿ ನೀಡಿ ಹೈನುಗಾರರೊಂದಿಗೆ ಸಮಾಲೋಚನೆ ನಡೆಸಿ ಮಾತನಾಡಿದರು.
ಉಳಿಯಾರಗೋಳಿ ಹಾಲು ಉತ್ಪಾದಕರ ಸಂಘ ಅಧ್ಯಕ್ಷ ಹಾಗೂ ಕೆಎಂಎಫ್ ನಿರ್ದೇಶಕ ಕಾಪು ದಿವಾಕರ ಶೆಟ್ಟಿ ಮಾತನಾಡಿ, ಹೈನುಗಾರರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಸಹಾಯಧನ ಹೆಚ್ಚಳವಾಗಬೇಕು. ಇತ್ತೀಚಿನ ವರ್ಷಗಳಲ್ಲಿ ರಾಸುಗಳ ಬಂಜೆತನ ಹೈನುಗಾರರಿಗೆ ತಲೆನೋವಾಗಿ ಪರಿಣಮಿಸುತ್ತಿದ್ದು, ರೈತರು ಹೈನುಗಾರಿಕೆಯಿಂದ ದೂರವಾಗುತ್ತಿದ್ದಾರೆ. ಹೈನುಗಾರಿಕೆಗೆ ವಿಶೇಷ ಪ್ಯಾಕೇಜ್ ನೀಡಬೇಕು. ರಾಷ್ಟ್ರೀಯ ಹೈನು ಅಭಿವೃದ್ಧಿ ನಿಗಮದಿಂದ ರೈತರಿಗೆ ಪೂರಕ ವರದಿ ಸಲ್ಲಿಕೆಯಾಗಿ ವರದಾನವಾಗಲಿ ಎಂದರು.
ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ವ್ಯವಸ್ಥಾಪಕ ಡಾ.ರವಿರಾಜ್ ಉಡುಪ, ಉಪವ್ಯವಸ್ಥಾಪಕ ಡಾ.ಮಾಧವ ಐತಾಳ್, ಉಳಿಯಾರಗೋಳಿ ಹಾಲು ಉತ್ಪಾದಕರ ಸಹಕಾರ ಸಂಘ ಉಪಾಧ್ಯಕ್ಷ ಐತಪ್ಪ ಕೋಟ್ಯಾನ್, ರಾಘು, ಜ್ಯೋತಿ ಹಾಗೂ ನಿರ್ದೇಶಕರು ಉಪಸ್ಥಿತರಿದ್ದರು. ವಿಸ್ತರಣಾಧಿಕಾರಿ ಸಮೀರ್ ನಿರೂಪಿಸಿದರು.
ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ವ್ಯಾಪ್ತಿಯಲ್ಲಿ 734 ಸಂಘಗಳಿದ್ದು, ಕೇವಲ 10 ಸಂಘ ಹೊರತುಪಡಿಸಿ ಉಳಿದೆಡೆ ಹಾಲು ಉತ್ಪಾದನೆ ಕಡಿಮೆಯಾಗಿದೆ. ಎನ್‌ಡಿಡಿಪಿಯಿಂದ 20 ಸೊಸೈಟಿ ಆಯ್ಕೆ ಮಾಡಿ ಹೈನುಗಾರರೊಂದಿಗೆ ಸಮಾಲೋಚನೆ ನಡೆಸಿ ಹೈನುಗಾರಿಕೆ ಉತ್ತೇಜಿಸಲು ಯೋಜನೆ ರೂಪಿಸುವ ಕಾರ್ಯ ಮಾಡಲಾಗುತ್ತಿದೆ. -ಸತೀಶ್ ರಾಷ್ಟ್ರೀಯ ಹೈನು ಅಭಿವೃದ್ಧಿ ನಿಗಮ ಪ್ರತಿನಿಧಿ https://www.vijayavani.net/gram-sabha-for-the-disabled-in-kodi-grama https://www.vijayavani.net/honest-staff-is-the-asset-of-the-organization