ನೆಲಮಂಗಲ : ರಸ್ತೆ ಮತ್ತು ಚರಂಡಿ ಕಾಮಗಾರಿ ವೈಜ್ಞಾನಿಕವಾಗಿರಬೇಕು. ಇಲ್ಲವಾದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಸರ್ಕಾರಕ್ಕೆ ವರದಿ ನೀಡಲಾಗುವುದು ಎಂದು ಶಾಸಕ ಎನ್.ಶ್ರೀನಿವಾಸ್ ಎಚ್ಚರಿಕೆ ನೀಡಿದರು.
ನಗರಸಭೆ 15ನೇ ಹಣಕಾಸು ಯೋಜನೆಯಡಿ 88.44 ಲಕ್ಷ ರೂಪಾಯಿ ಅನುದಾನದಲ್ಲಿ ನಗರದ ಎಂ.ಜಿ.ರಸ್ತೆ ಅಭಿವೃದ್ಧಿ ಕಾರ್ಯಕ್ಕೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು.
ಅಭಿವೃದ್ಧಿ ಕೆಲಸ ಮಾಡುವುದಕ್ಕೂ ಮುನ್ನ ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲಿಸಿ ಸ್ಥಳೀಯರಿಂದ ಮಾಹಿತಿ ಪಡೆದು ನಂತರದಲ್ಲಿ ಅಂದಾಜು ವೆಚ್ಚ ನಿಗದಿಪಡಿಸಬೇಕು. ಅದನ್ನು ಬಿಟ್ಟು ಕಚೇರಿಯಲ್ಲಿದ್ದುಕೊಂಡು ಅಂದಾಜು ವೆಚ್ಚದ ಲೆಕ್ಕಚಾರ ಮಾಡಿದಲ್ಲಿ ಗುತ್ತಿಗೆದಾರರ ಜತೆಗೆ ಸಾರ್ವಜನಿಕರೂ ತೊಂದರೆ ಅನುಭವಿಸಬೇಕುತ್ತದೆ ಎಂದರು.
ಹೆಚ್ಚುವರಿ ಅನುದಾನ: ಎಂ.ಜಿ.ರಸ್ತೆಯ ಒಂದು ಕಡೆ ಚರಂಡಿ ನಿರ್ಮಿಸಿ ರಸ್ತೆ ಡಾಂಬರೀಕರಣ ಕಾಮಗಾರಿಗೆ ಅಂದಾಜು ವೆಚ್ಚ ಮಾಡಿಕೊಳ್ಳಲಾಗಿದ್ದು, ಅನುದಾನ ಕೊರತೆ ಆಗಬಹುದು ಎಂಬುದನ್ನು ಅಂದಾಜಿಸಿದ ಶಾಸಕರು, ಎರಡೂ ಕಡೆ ಚರಂಡಿ ನಿರ್ಮಿಸುವುದು ಹಾಗೂ ರಸ್ತೆ ಅಭಿವೃದ್ಧಿಗೆ ಹೆಚ್ಚುವರಿ 50 ಲಕ್ಷ ರೂ.ಒದಗಿಸಲಾಗುವುದು ಎಂದರು.
ರಸ್ತೆ ಪರಿಶೀಲನೆ: ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದ ಬಳಿಕ ಸ್ಥಳೀಯ ಮುಖಂಡರೊಂದಿಗೆ ರಸ್ತೆಯುದ್ದಕ್ಕೂ ಶಾಸಕ ಎನ್.ಶ್ರೀನಿವಾಸ್ ಸ್ಥಳ ಪರಿಶೀಲಿಸಿದರು. ನಗರಸಭೆ ಪೌರಾಯುಕ್ತರು, ಎಇಇ ಮತ್ತು ಜೆಇ ಅವರಿಗೆ ಗುಣಮಟ್ಟ ಮತ್ತು ವೈಜ್ಞಾನಿಕವಾಗಿ ಕಾಮಗಾರಿ ಕೈಗೊಳ್ಳುವಂತೆ ಸಲಹೆ ನೀಡಿದರು.
ನಗರಸಭೆ ಸದಸ್ಯೆ ದಾಕ್ಷಾಯಣಿ ರವಿ, ನರಸಿಂಹಮೂರ್ತಿ, ಆನಂದ್, ಗಂಗಾಧರ್ ರಾವ್, ಸಿ.ಪ್ರದೀಪ್, ಎನ್.ಗಣೇಶ್, ಪುರುಷೋತ್ತಮ, ಪದ್ಮನಾಭ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಟಿ.ನಾಗರಾಜು,ಪೌರಾಯುಕ್ತ ಎಚ್.ಎಂ.ಮನುಕುಮಾರ್, ಎಇಇ ನಾಗಲಿಂಗ ಬಡೀಗೇರ, ಜೆಇ ಶ್ರೀನಿವಾಸ್, ಗುತ್ತಿಗೆದಾರ ಮಹದೇವ್ ಇದ್ದರು.
ಶೀಘ್ರ ಕಾಮಗಾರಿಗೆ ಪೂಜೆ
ನಗರಸಭೆ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವ ಉದ್ದೇಶದಿಂದ, ಪೌರಾಡಳಿತ ಇಲಾಖೆ ಸೇರಿ ಮುಖ್ಯಂತ್ರಿಗಳಿಗೂ ಹೆಚ್ಚುವರಿ ಅನುದಾನಕ್ಕಾಗಿ ಪ್ರಸ್ತಾವನೆ ಸಲ್ಲಿಸಿದ್ದು, ಶೀಘ್ರದಲ್ಲೇ ಕಾಮಗಾರಿಗೆ ಪೂಜೆ ಮಾಡಲಾಗುವುದು ಎಂದು ಶಾಸಕ ಎನ್.ಶ್ರೀನಿವಾಸ್ ಮಾಹಿತಿ ನೀಡಿದರು.