ಸಿಂಧನೂರು ತಾಲೂಕಿನ ಯಾಪಲಪರ್ವಿಯಲ್ಲಿ ಹಾನಿಗೀಡಾದ ಹತ್ತಿ ಬೆಳೆಯನ್ನು ಶಾಸಕ ಹಂಪನಗೌಡ ಬಾದರ್ಲಿ ವೀಕ್ಷಣೆ ಮಾಡಿದರು. ತಹಸೀಲ್ದಾರ್ ಅರುಣ್ ದೇಸಾಯಿ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ ನಾಗರಾಳ, ಪ್ರಮುಖರಾದ ಆರ್.ತಿಮ್ಮಯ್ಯ ನಾಯಕ, ತಾಪಂ ಮಾಜಿ ಅಧ್ಯಕ್ಷ ಬಿ.ಎಚ್.ನಾಯಕ, ಅರುಣಕುಮಾರ ಇತರರಿದ್ದರು. 
ಜಿಲ್ಲೆ

ಸರ್ಕಾರಕ್ಕೆ ಶೀಘ್ರ ವರದಿ ಸಲ್ಲಿಸಿ

ಸಿಂಧನೂರು: ಬೆಳೆಹಾನಿ ಸರ್ವೇ ನಡೆಸಿ, ಶೀಘ್ರವೇ ಸರ್ಕಾರಕ್ಕೆ ವರದಿ ಸಲ್ಲಿಸಲು ಅಗತ್ಯ ಕ್ರಮಕೈಗೊಳ್ಳಬೇಕು ಎಂದು ತಾಲೂಕು ಆಡಳಿತ ಹಾಗೂ ಕೃಷಿ ಇಲಾಖೆ ಅಧಿಕಾರಿಗಳಿಗೆ ಶಾಸಕ ಹಂಪನಗೌಡ ಬಾದರ್ಲಿ ಸೂಚನೆ ನೀಡಿದರು.

ತಾಲೂಕಿನ ಯಾಪಲಪರ್ವಿ, ರಾಗಲಪರ್ವಿ, ಗೋನ್ವಾರ ಸೇರಿದಂತೆ ವಿವಿಧ ಗ್ರಾಮಗಳ ಬೆಳೆ ಹಾನಿ ಪ್ರದೇಶಕ್ಕೆ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದರು. ಸಿಂಧನೂರು ತಾಲೂಕಿನ ಹುಡಾ, ವಲ್ಕಂದಿನ್ನಿ, ಸಾಲಗುಂದ, ಜವಳಗೇರಾ ಹೋಬಳಿ ವ್ಯಾಪ್ತಿಯಲ್ಲಿ ಹತ್ತಿ, ಜೋಳ ಹಾಗೂ ಸೂರ್ಯಕಾಂತಿ ಬೆಳೆ ಹಾಳಾಗಿವೆ. ಖುದ್ದು ಹೊಲಗಳಿಗೆ ತೆರಳಿ ನೋಡಿದ್ದು, ಹತ್ತಿ ಮತ್ತು ಜೋಳದ ಬೆಳೆ ಇನ್ನೂ ನೀರಿನಲ್ಲಿ ನಿಂತಿದೆ.

ಮಳೆ ಕಡಿಮೆಯಾದರೆ ಸ್ವಲ್ಪ ಪ್ರಮಾಣದಲ್ಲಿ ಬೆಳೆ ರೈತರಿಗೆ ದಕ್ಕಲಿದೆ. ಇಲ್ಲವಾದರೆ ಸಂಪೂರ್ಣ ಬೆಳೆ ನಷ್ಟವಾಗಲಿದೆ. ಈಗಾಗಲೇ ಸರ್ವೇ ನಡೆಸಲಾಗುತ್ತಿದೆ. ಇನ್ನೂ ಮಳೆ ಇರುವುದರಿಂದ ಎಲ್ಲವನ್ನು ನೋಡಿಕೊಂಡು ಬೆಳೆ ನಷ್ಟ, ಮನೆಗಳ ಕುಸಿತ ಸೇರಿದಂತೆ ಎಲ್ಲವನ್ನೂ ಪರಿಗಣನೆಗೆ ತೆಗೆದುಕೊಂಡು ತಾಲೂಕು ಆಡಳಿತ ಮತ್ತು ಕೃಷಿ ಇಲಾಖೆ ವರದಿ ತಯಾರಿಸಲಿದೆ. ನಂತರ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಸಲ್ಲಿಸಿ, ರೈತರಿಗೆ ಪರಿಹಾರ ಒದಗಿಸಲಾಗುವುದು ಎಂದು ತಿಳಿಸಿದರು.

ತಹಸೀಲ್ದಾರ್ ಅರುಣ್ ದೇಸಾಯಿ ಮಾತನಾಡಿ, ಕೂಡಲೇ ಸರ್ವೇ ನಡೆಸಿ, ನಷ್ಟದ ವರದಿ ತಯಾರಿಸಲು ಕೃಷಿ ಮತ್ತು ಕಂದಾಯ ಇಲಾಖೆ ಸಿಬ್ಬಂದಿಗೆ ಸೂಚಿಸಿದರು.