ಅರಕಲಗೂಡು ತಾಲೂಕು ಮಲ್ಲಿಪಟ್ಟಣದ ತೋಟದಲ್ಲಿ ಕಾಫಿ ಬೆಳೆಯನ್ನು ಜಿಲ್ಲಾ ಕಾಫಿ ಮಂಡಳಿ ಉಪ ನಿರ್ದೇಶಕ ಶಕ್ತಿ ವೀಕ್ಷಿಸಿದರು. ಎಂ.ಸಿ.ಬಸವರಾಜ್, ಪ್ರದೀಪ್, ಅರುಣ್ ಕುಮಾರ್, ಬಸವರಾಜ್ , ಧರಣಿ ಭಾಗವಹಿಸಿದ್ದರು. 
ಜಿಲ್ಲೆ

ಕಾಫಿ ಬೆಳೆ ಹಾನಿ ಕುರಿತು ಸರ್ಕಾರಕ್ಕೆ ವರದಿ

ಅರಕಲಗೂಡು: ಅತಿಯಾದ ಮಳೆಗೆ ಸಿಲುಕಿ ಕಾಫಿ ಬೆಳೆ ಹಾನಿಯಾಗಿರುವ ಕುರಿತು ಸರ್ಕಾರಕ್ಕೆ ವರದಿ ನೀಡುವುದಾಗಿ ಕಾಫಿ ಮಂಡಳಿ ಜಿಲ್ಲಾ ಉಪ ನಿರ್ದೇಶಕ ಶಕ್ತಿ ತಿಳಿಸಿದರು.

ಮಲ್ಲಿಪಟ್ಟಣದಲ್ಲಿ ಇತ್ತೀಚೆಗೆ ತಾಲೂಕು ಕಾಫಿ ಬೆಳೆಗಾರರ ಸಂಘ ಆಯೋಜಿಸಿದ್ದ ಕಾಳುಮೆಣಸು ಬೆಳೆ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಮಳೆಯಿಂದ ಹಲವೆಡೆ ಕಾಫಿ ಬೆಳೆ ಹಾನಿಯಾಗಿರುವ ಕುರಿತು ಮಾಹಿತಿ ಬಂದಿದೆ. ಈ ಬಗ್ಗೆ ಪರಿಶೀಲಿಸಿ ವರದಿ ಕಳಿಸಲಾಗುವುದು. ಕಾಫಿ ಬೆಳೆಯಲ್ಲಿ ಹೂವು ಕಟ್ಟುವ ಹಂತದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಮಾಹಿತಿ ನೀಡಿದರು.

ಎಸ್‌ಎಲ್‌ಒ ಬಸವರಾಜ್ ಅವರು ಕಾಫಿ ಮತ್ತು ಮೆಣಸು ಬೆಳೆಯಲ್ಲಿ ಕೊಳೆರೋಗ, ಗೊಬ್ಬರ ನಿರ್ವಹಣೆ ಕುರಿತು, ಜೆಎಲ್‌ಒ ಪ್ರದೀಪ್ ಮಣ್ಣು ಪರೀಕ್ಷೆಯ ಮಹತ್ವ ಕುರಿತು ಹಾಗೂ ಸಹಾಯಕ ತೋಟಗಾರಿಕೆ ಅಧಿಕಾರಿ ಧನಂಜಯ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಮೆಣಸು ಬೆಳೆಗೆ ದೊರೆಯುವ ಸಹಾಯಧನ ಹಾಗೂ ಕೃಷಿ ಹೊಂಡ ನಿರ್ಮಾಣ ಕುರಿತು ಮಾಹಿತಿ ನೀಡಿದರು.

ಕಾರ್ಯಕ್ರಮದ ನಂತರ ಕಾಫಿ ತೋಟಕ್ಕೆ ಭೇಟಿ ನೀಡಿ ಬೆಳೆ ವೀಕ್ಷಣೆ ಮಾಡಿದರು. ತಾಲೂಕು ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಎಂ.ಸಿ.ಬಸವರಾಜ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಎ.ಸಿ.ದೇವರಾಜೇಗೌಡ, ಕಾರ್ಯದರ್ಶಿ ವಿಜಯಕುಮಾರ್, ರಾಜ್ಯ ಕಾಫಿ ಬೆಳೆಗಾರರ ಸಂಘದ ನಿರ್ದೇಶಕ ಎಚ್.ಎನ್.ವೆಂಕಟೇಶ್, ಜಿಲ್ಲಾ ಬೆಳೆಗಾರರ ಸಂಘದ ನಿರ್ದೇಶಕರಾದ ಅರುಣ್ ಕುಮಾರ್, ಕಾಂತರಾಜ್, ಧರಣಿ, ಬೆಳೆಗಾರರಾದ ಮಾಗೋಡು ಬಸವರಾಜ್, ಪಿ. ಕೃಷ್ಣರಾಜ್, ಎಂ.ಎಂ. ವಿಶ್ವನಾಥ್ ಇದ್ದರು.