ನಗರ ನಾಡಕಚೇರಿಯಲ್ಲಿ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡ ಶಾಸಕ ಆರಗ ಜ್ಞಾನೇಂದ್ರ.  
ಜಿಲ್ಲೆ

ಉಪ ತಹಸೀಲ್ದಾರ್ ಕಾಣೆಯಾಗಿದ್ದಾರೆಂದು ದೂರು ಕೊಡಿ!

Shivamogga - Desk - Vinayakumar D B

ಹೊಸನಗರ: ತಾಲೂಕಿನ ಹೋಬಳಿ ಕೇಂದ್ರ ನಗರ ನಾಡಕಚೇರಿಗೆ ಗುರುವಾರ ಬೆಳಗ್ಗೆ ದಿಢೀರ್ ಭೇಟಿ ನೀಡಿದ ಶಾಸಕ ಆರಗ ಜ್ಞಾನೇಂದ್ರ, ಸಮಯಕ್ಕೆ ಸರಿಯಾಗಿ ಕರ್ತವ್ಯಕ್ಕೆ ಹಾಜರಾಗದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಕಚೇರಿ ತೆರೆದು ಗಂಟೆ ಕಳೆದರೂ ಉಪ ತಹಸೀಲ್ದಾರ್ ಗೌತಮ್ ಕರ್ತವ್ಯಕ್ಕೆ ಹಾಜರಾಗದಿರುವುದನ್ನು ಕಂಡು ಸಿಡಿಮಿಡಿಗೊಂಡಿದ್ದಾರೆ. ಈ ಬಗ್ಗೆ ಕಚೇರಿಯಲ್ಲಿದ್ದ ಸಿಬ್ಬಂದಿಯನ್ನು ವಿಚಾರಿಸಿದ್ದಾರೆ. ಜತೆಗೆ ಕಚೇರಿಯ ಹಾಜರಾತಿ ಪುಸ್ತಕ ಪರಿಶೀಲಿಸಿದರು. ತಾಲೂಕು ಕಚೇರಿಗೆ ದೂರವಾಣಿ ಕರೆ ಮಾಡಿದ ಶಾಸಕರು, ಉಪ ತಹಸೀಲ್ದಾರ್ ಎಲ್ಲಿ ಎಂದು ವಿಚಾರಿಸಿದ್ದಾರೆ. ಅಲ್ಲೂ ಇಲ್ಲ ಎಂಬ ಉತ್ತರ ಬಂದ ಕಾರಣ ಠಾಣೆಗೆ ದೂರು ನೀಡಿ, ಅಧಿಕಾರಿಯನ್ನು ಹುಡುಕಿಸಿ ಕೊಡಿ ಎಂದು ತಾಕೀತು ಮಾಡಿದ್ದಾರೆ.
ಮಧ್ಯಾಹ್ನ 12 ಗಂಟೆ ವೇಳೆಗೆ ಕಚೇರಿಗೆ ಆಗಮಿಸಿದ ಗೌತಮ್ ಅವರನ್ನು ಕಂಡು ಗರಂ ಆದ ಆರಗ ಜ್ಞಾನೇಂದ್ರ, ಏನ್ರಿ ಎಷ್ಟೊತ್ತಿಗೆ ಬರೋದು? ಜನರ ಕೆಲಸ ಮಾಡೋದು ಯಾವಾಗ? ಎಂದು ಪ್ರಶ್ನಿಸಿದ್ದಾರೆ. ಸಮಾಜಾಯಿಷಿ ನೀಡಲು ಗೌತಮ್ ಮುಂದಾಗುತ್ತಿದ್ದಂತೆ ಗರಂ ಆದ ಆರಗ, ಇದನ್ನೆಲ್ಲ ನಾನು ಸಹಿಸೋದಿಲ್ಲ. ಜನರು ನಿಮಗಾಗಿ ಕಾಯೋದಲ್ಲ, ನಿಗದಿತ ಸಮಯದೊಳಗೆ ಕಚೇರಿಯಲ್ಲಿದ್ದು ಜನರ ಕೆಲಸವನ್ನು ತಡ ಮಾಡದೇ ಮಾಡಿಕೊಡಬೇಕು ಎಂದು ತಾಕೀತು ಮಾಡಿದರು.
ಬಳಿಕ ಕಚೇರಿಯ ಎಲ್ಲ ಸಿಬ್ಬಂದಿಯನ್ನು ಉಲ್ಲೇಖಿಸಿ ಜನರ ಕೆಲಸಗಳಿಗೆ ಹಣ ತೆಗೆದುಕೊಳ್ಳುವ ಬಗ್ಗೆ ಭಾರಿ ದೂರುಗಳಿವೆ. ಯಾವ್ಯಾವ ಕೆಲಸಗಳಿಗೆ ಎಷ್ಟು ಅನ್ನೋದು ಗೊತ್ತಿದೆ. ಇಲ್ಲಿಗೆ ಅದನ್ನು ನಿಲ್ಲಿಸಿ ಇಲ್ಲವಾದರೆ ಸುಮ್ಮನಿರುವ ಜಾಯಮಾನ ನನ್ನದಲ್ಲ ಎಂದು ಎಚ್ಚರಿಸಿದರು.
ನಾಡಕಚೇರಿ ಭೇಟಿಗೂ ಮುನ್ನ ನಗರ ಹಿರೇಮಠ ಬೀದಿಯಲ್ಲಿ ನಿರ್ಮಾಣ ಆಗುತ್ತಿರುವ ಪೊಲೀಸ್ ವಸತಿ ಸಮುಚ್ಚಯ ಕಾಮಗಾರಿಯನ್ನು ಆರಗ ಜ್ಞಾನೇಂದ್ರ ಪರಿಶೀಲಿಸಿದರು. ಆಗಾಗ್ಗೆ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಗಮನಹರಿಸುವಂತೆ ಪಿಎಸ್‌ಐ ರಮೇಶ್ ಅವರಿಗೆ ಸೂಚಿಸಿದರು.
ಶಾಸಕರ ಸಹಾಯಕ ಹೊದಲ ಬಸವರಾಜ್, ನಗರ ಬಿಜೆಪಿ ಘಟಕದ ಅಧ್ಯಕ್ಷ ಎನ್.ವೈ.ಸುರೇಶ್, ತಾಲೂಕು ಯುವ ಮೋರ್ಚಾ ಅಧ್ಯಕ್ಷ ನಗರ ನಿತಿನ್, ಪ್ರಮುಖರಾದ ರಾಜೇಶ ಹಿರಿಮನೆ, ಕವಿರಾಜ್, ರಮೇಶ್ ಇತರರಿದ್ದರು.