ತಿ.ನರಸೀಪುರ ಶ್ರೀ ವಾಲ್ಮೀಕಿ ಶಿಕ್ಷಣ ಸಂಸ್ಥೆಗೆ ಬುಧವಾರ ಭೇಟಿ ನೀಡಿದ್ದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರನ್ನ್ನು ತಾಲೂಕು ನಾಯಕರ ಸಂಘದಿಂದ ಸನ್ಮಾನಿಸಲಾಯಿತು. ಎಸ್.ಸಿ.ಬಸವರಾಜು, ಎಂ.ಡಿ.ಬಸವರಾಜು, ಆಲಗೂಡು ನಾಗರಾಜ್, ರಂಗರಾಜಪುರ ಸಿದ್ದರಾಜು, ಎ.ಜೆ.ವೆಂಕಟೇಶ್ ಇತರರು ಇದ್ದರು. 
ಜಿಲ್ಲೆ

ಜನರಿಗೆ ಅನುಕೂಲವಾಗುವಂತೆ ವರದಿ ಜಾರಿ

ತಿ.ನರಸೀಪುರ: ಸಾಮಾಜಿಕವಾಗಿ ಎಲ್ಲ ವರ್ಗದ ಜನರಿಗೆ ಅನುಕೂಲವಾಗುವಂತೆ ಜಾತಿ ಜನಗಣತಿ ವರದಿ ಜಾರಿಗೊಳಿಸುವುದಾಗಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮಾಹಿತಿ ನೀಡಿದರು.

ಪಟ್ಟಣದ ಶ್ರೀ ವಾಲ್ಮೀಕಿ ಶಿಕ್ಷಣ ಸಂಸ್ಥೆಗೆ ಬುಧವಾರ ಭೇಟಿ ನೀಡಿ, ಅಪೂರ್ಣಗೊಂಡಿರುವ ತಾಲೂಕು ನಾಯಕರ ಸಂಘದ ಸಮುದಾಯ ಭವನ ಪರಿಶೀಲಿಸಿ ಮಾತನಾಡಿದರು.

ಈಗಿನ ಜಾತಿ ಜನಗಣತಿ ವರದಿಯನ್ನು ಮಂಡಿಸುವುದನ್ನು ಮುಖ್ಯಮಂತ್ರಿಗಳು ಮುಂದೂಡಿದ್ದಾರೆ. ಎಲ್ಲರಿಗೂ ಅನುಕೂಲ ಆಗುವ ನಿಟ್ಟಿನಲ್ಲಿ ವರದಿ ಜಾರಿಗೆ ತರುತ್ತೇವೆ ಎಂದರು.

ಶ್ರೀ ಮಲೆ ಮಹದೇಶ್ವರ ಬೆಟ್ಟದಲ್ಲಿ ಗುರುವಾರ ಸಚಿವ ಸಂಪುಟ ಸಭೆ ನಡೆಯುವ ಹಿನ್ನೆಲೆಯಲ್ಲಿ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಪ್ರವಾಸವನ್ನು ಹಮ್ಮಿಕೊಂಡಿದ್ದೇನೆ. ಸಮುದಾಯದ ಜನರ ಅಹವಾಲು ಆಲಿಸಲು ಕೆಲವೆಡೆ ವೈಯಕ್ತಿಕ ಭೇಟಿಯನ್ನು ನೀಡುತ್ತಿದ್ದೇನೆ. ನಾಳಿನ ಸಚಿವ ಸಂಪುಟ ಸಭೆಯಲ್ಲಿ ಈ ಭಾಗದ ಅಭಿವೃದ್ಧಿ ಯೋಜನೆಗಳಿಗೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುವುದು ಎಂದರು.

ತಾಲೂಕು ನಾಯಕರ ಸಮುದಾಯ ಭವನ ಕಾಮಗಾರಿಯನ್ನು ಪೂರ್ಣಗೊಳಿಸಬೇಕಾದ ಜವಾಬ್ದಾರಿ ನಮ್ಮ ಸರ್ಕಾರದ ಮೇಲಿದೆ. ಸಂಘ-ಸಂಸ್ಥೆಗಳು ಹಾಗೂ ಶಿಕ್ಷಣ ಸಂಸ್ಥೆ ಸಲ್ಲಿಸಿರುವ ಮನವಿಯನ್ನು ಪರಿಶೀಲಿಸಿ ಸಾಧ್ಯವಾದಷ್ಟು ನೆರವನ್ನು ನೀಡುತ್ತೇನೆ ಎಂದು ಭರವಸೆ ನೀಡಿದರು.

ಶ್ರೀವಾಲ್ಮೀಕಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಆಲಗೂಡು ನಾಗರಾಜು ಮಾತನಾಡಿ, ತಾಲೂಕು ನಾಯಕರ ಸಮುದಾಯ ಭವನ ಕಾಮಗಾರಿಯನ್ನು ಪೂರ್ಣಗೊಳಿಸಲು ಸರ್ಕಾರದಿಂದ ಹೆಚ್ಚುವರಿ ಅನುದಾನವನ್ನು ಮಂಜೂರು ಮಾಡಬೇಕು. ಶಿಕ್ಷಣ ಸಂಸ್ಥೆಗೆ ಸಚಿವರು ತಮ್ಮ ನೆನಪಿಗಾಗಿ ವೈಯಕ್ತಿಕ ನೆರವು ನೀಡಿ ಕೊಠಡಿಯೊಂದನ್ನು ನಿರ್ಮಾಣ ಮಾಡಿಕೊಡಬೇಕು ಎಂಬುದು ಸೇರಿದಂತೆ ಇತರ ಹಲವು ಬೇಡಿಕೆಗಳುಳ್ಳ ಮನವಿ ಪತ್ರ ಸಲ್ಲಿಸಿದರು.

ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಜಿ.ಪಂ ಮಾಜಿ ಅಧ್ಯಕ್ಷ ಎಸ್.ಸಿ.ಬಸವರಾಜು, ಮಾಜಿ ಸದಸ್ಯರಾದ ಮಂಜುನಾಥ, ಹೊನ್ನನಾಯಕ, ಕೆ.ಸಿ.ಲೋಕೇಶ್, ಸುಧಾಮಣಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಡಿ. ಬಸವರಾಜು, ನಿವೃತ್ತ ಮುಖ್ಯಲೆಕ್ಕಾಧಿಕಾರಿ ಮಾಲಂಗಿ ಜೆ.ಶಿವಸ್ವಾಮಿ, ನಾಯಕರ ಸಂಘದ ಅಧ್ಯಕ್ಷ ಚಿಕ್ಕಯ್ಯ, ಪ್ರಧಾನ ಕಾರ್ಯದರ್ಶಿ ಶಶಿಧರ್, ಪ್ರಥಮ ದರ್ಜೆ ಗುತ್ತಿಗೆದಾರ ರಂಗರಾಜಪುರ ಎಂ.ಸಿದ್ದರಾಜು, ಲೋಕೋಪಯೋಗಿ ಅಧೀಕ್ಷ ಇಂಜಿನಿಯರ್ ವಿನಯ್ ಕುಮಾರ್, ಎಇ ಇಂಜಿನಿಯರ್ ಸತೀಶ್ ಚಂದ್ರನ್, ಕೊಳತ್ತೂರು ಡೈರಿ ಅಧ್ಯಕ್ಷ ಕೆ. ಎನ್.ಕುಮಾರ, ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಂ.ಪಿ.ಮರಿಸ್ವಾಮಿ, ಗ್ರಾ.ಪಂ ಸದಸ್ಯ ಬೂದಹಳ್ಳಿ ಸಿದ್ದರಾಜು, ಹೆಮ್ಮಿಗೆ ಹೊನ್ನನಾಯಕ, ಮಾಜಿ ಅಧ್ಯಕ್ಷ ಎ.ಜೆ. ವೆಂಕಟೇಶ್, ಕೆಬ್ಬೆ ನಾಗಣ್ಣ, ಕೆಂಡನಕೊಪ್ಪಲು ಕುಮಾರ, ಮಾಜಿ ಉಪಾಧ್ಯಕ್ಷ ಹುಣಸೂರು ನಾಗರಾಜು, ಮಾಜಿ ಸದಸ್ಯ ಸುಂದರ, ಮುಖಂಡರಾದ ಘಟಕ ಮಹದೇವ, ಶಾಂತರಾಜು, ತಲಕಾಡು ಮಾದೇಶ, ತಿರುಮಕೂಡಲು ಕುಮಾರ, ರಮೇಶ ಇದ್ದರು.