ಮಾಯಕೊಂಡ: ದಾವಣಗೆರೆ ತಾಲೂಕು ಹುಚ್ಚವ್ವನಹಳ್ಳಿ ಗ್ರಾಮದಲ್ಲಿ ಗಿಡಗಳು ಬೆಳೆದು, ಕಸ ಕಡ್ಡಿ ತುಂಬಿ ಕಲುಷಿತಗೊಂಡಿದ್ದ ತೆರೆದ ಬಾವಿಗಳ ಸ್ವಚ್ಛತೆಗೆ ಗ್ರಾಮ ಪಂಚಾಯಿತಿ ಮುಂದಾಗಿದೆ.
ವಿಜಯವಾಣಿ ಪತ್ರಿಕೆಯಲ್ಲಿ ಮಂಗಳವಾರ ‘ಕಸ ವಿಲೇವಾರಿ ಘಟಕಗಳಾದ ಮಾಯಕೊಂಡದ ತೆರೆದ ಬಾವಿಗಳು’ ಶೀರ್ಷಿಕೆಯಡಿ ಬಿತ್ತರಗೊಂಡ ವರದಿಯಿಂದ ಎಚ್ಚೆತ್ತುಕೊಂಡ ಗ್ರಾಪಂ ಅಧಿಕಾರಿಗಳು ಬಾವಿಗಳ ಸ್ವಚ್ಛತೆಗೆ ಕಾರ್ಯಪ್ರವೃತ್ತರಾಗಿದ್ದಾರೆ.
ಗ್ರಾಪಂ ಪಿಡಿಒ ಎನ್.ಸೋಮಶೇಖರ್ ಅವರು ಸಿಬ್ಬಂದಿಯೊಂದಿಗೆ ಮಂಗಳವಾರ ಸ್ಥಳಕ್ಕೆ ಭೇಟಿ ನೀಡಿ ಬಾವಿಗಳಲ್ಲಿ ಬೆಳೆದಿದ್ದ ಗಿಡಗಳನ್ನು ಕತ್ತರಿಸಿ ಬಾವಿಯ ಸುತ್ತಮುತ್ತ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿದರು.
ಗ್ರಾಮದಲ್ಲಿ ಪ್ರಸ್ತುತ ಮೂರು ಬಾವಿಗಳಲ್ಲಿ ನೀರು ತುಂಬಿದ್ದು, ಎಲ್ಲ ಬಾವಿಗಳನ್ನು ಸ್ವಚ್ಛಗೊಳಿಸಲು ಗ್ರಾಪಂ ಸನ್ನದ್ಧವಾಗಿದೆ. ಒಂದೆರಡು ದಿನಗಳಲ್ಲಿ ಮೋಟಾರ್ ಮೂಲಕ ನೀರನ್ನು ಹೊರಹಾಕಿ ಸಂಪೂರ್ಣ ಸ್ವಚ್ಛತೆ ಕೈಗೊಳ್ಳಲಾಗುವುದು ಎಂದು ಪಿಡಿಒ ಎನ್.ಸೋಮಶೇಖರ್ ತಿಳಿಸಿದರು.