ಕೆ.ಆರ್.ಪೇಟೆ: ಸೆಸ್ಕ್ ಅಧಿಕಾರಿಗಳ ನಿರ್ಲಕ್ಷೃಕ್ಕೆ ಈಗಾಗಲೇ ತಾಲೂಕಿನಾದ್ಯಂತ ಹತ್ತಾರು ಜೀವಗಳು ಬಲಿಯಾಗಿದ್ದು, ಕೂಡಲೇ ಹಳೆಯ ವಿದ್ಯುತ್ ಕಂಬ ಹಾಗೂ ತಂತಿಗಳನ್ನು ಬದಲಿಸುವಂತೆ ಅಧಿಕಾರಿಗಳಿಗೆ ಶಾಸಕ ಎಚ್.ಟಿ.ಮಂಜು ಸೂಚಿಸಿದರು.
ತಾಲೂಕಿನ ಬೂಕನಕೆರೆ ಹೋಬಳಿಯ ಚಿಕ್ಕಗಾಡಿನಹಳ್ಳಿ ಗ್ರಾಮಕ್ಕೆ ಸೋಮವಾರ ಭೇಟಿ ನೀಡಿದಾಗ ಗ್ರಾಮದೊಳಗಿರುವ ವಿದ್ಯುತ್ ಕಂಬ ಮುರಿದು ಬೀಳುವ ಸ್ಥಿತಿ ಮತ್ತು ವೈರ್‌ಗಳ ಜೋತು ಬಿದ್ದಿರುವುದನ್ನು ಕಂಡು ಶಾಸಕ ಅಸಮಾಧಾನ ವ್ಯಕ್ತಪಡಿಸಿದರು.
ಸೆಸ್ಕ್ ಇಇ ವಿನುತಾ ಅವರಿಗೆ ಪೋನ್ ಮಾಡಿ, ವಿದ್ಯುತ್ ಅವಘಡದಿಂದಾಗಿ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಮತ್ತೆ ಏನಾದರೂ ಅವಘಡ ಸಂಭವಿಸಿದರೆ ನಿಮ್ಮನ್ನೇ ಜವಾಬ್ದಾರರನ್ನಾಗಿ ಮಾಡಬೇಕಾಗುತ್ತದೆ. ಗ್ರಾಮದಲ್ಲಿ ಶಿಥಿಲವಾಗಿರುವ ವಿದ್ಯುತ್‌ತಂತಿ ಮತ್ತು ಕಂಬಗಳನ್ನು ತಕ್ಷಣ ಬದಲಾಯಿಸಿ ಎಂದು ಸೂಚಿಸಿದರು.
ಕಳೆದ ವಾರವಷ್ಟೆ ಕಿಕ್ಕೇರಿ ಬಳಿಯ ಲಕ್ಷ್ಮೀಪುರ ಗ್ರಾಮದಲ್ಲಿ ಜಮೀನಿಗೆ ತೆರಳುವ ವೇಳೆ ವಿದ್ಯುತ್ ತಂತಿ ತುಂಡಾಗಿ ಬಿದ್ದಿರುವುದನ್ನು ಗಮನಿಸದೆ ಮಹಿಳೆಯೊಬ್ಬರು ಮೃತಪಟ್ಟಿದ್ದು ಹಸಿರಾಗಿರುವಾಗಲೇ ಇನ್ನೂ ಎಷ್ಟು ಜೀವಗಳನ್ನು ಬಲಿ ಪಡೆಯಬೇಕು. ಜೀವಗಳಿಗೆ ಬೆಲೆ ಇಲ್ಲವೇ. ತಾಲೂಕಿನಾದ್ಯಂತ ಹಳೆಯ ವಿದ್ಯುತ್ ಕಂಬಗಳನ್ನು ಬದಲಿಸಲು ಈಗಾಗಲೇ ಹಲವು ಬಾರಿ ತಿಳಿಸಿದ್ದೇನೆ. ಆದರೂ ನೀವು ನಿರ್ಲಕ್ಷೃ ತೋರುತ್ತಿರುವುದು ಸರಿಯಲ್ಲ. ಹಲವಾರು ಕಡೆಗಳಲ್ಲಿ ವಿದ್ಯುತ್ ಕಂಬಗಳಿಗೆ ಬಳ್ಳಿಗಳು ಸುತ್ತಿಕೊಂಡು ಕಂಬಗಳೇ ಕಾಣದಂತಾಗಿವೆ. ಹೀಗಿದ್ದರೂ ಅವುಗಳನ್ನು ತೆರವುಗೊಳಿಸದೇ ಇರುವುದು ನಿಮ್ಮ ಕರ್ತವ್ಯ ನಿರ್ಲಕ್ಷತೆಯನ್ನು ತೋರಿಸುತ್ತದೆ. ಅಧಿಕಾರಿಗಳು ಹೆಚ್ಚಿನ ಜವಾಬ್ದಾರಿಯಿಂದ ಕೆಲಸ ಮಾಡಬೇಕು ಎಂದರು.
ಭೇಟಿ ಸಮಯದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಪರಮೇಶ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಸೋಮಶೇಖರ್, ಗ್ರಾಮ ಪಂಚಾಯಿತಿ ಸದಸ್ಯೆ ಪಲ್ಲವಿ ಗಣೇಶ, ಭೂ ದಾಖಲೆಗಳ ಸಹಾಯಕ ನಿರ್ದೇಶಕರು ಸಿದ್ದಯ್ಯ, ಗ್ರಾಮದ ಮುಖಂಡರಾದ ಶಿವಯ್ಯ, ಚೆಲುವರಾಜ್, ಲೋಕೇಶ್, ಮಹೇಶ್, ಕ್ರಾಂತಿ ಬಸವರಾಜ್ ಹಾಜರಿದ್ದರು.